Advertisement

ನಟ ಸುಶಾಂತ್‌ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸಚಿವ ಆದಿತ್ಯ ಠಾಕ್ರೆ

01:53 PM Aug 06, 2020 | mahesh |

ಮುಂಬಯಿ: ಮಹಾರಾಷ್ಟ್ರ ರಾಜ್ಯ ಸಚಿವ ಆದಿತ್ಯ ಠಾಕ್ರೆ ಅವರು ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಸಂಬಂಧಿಸಿರುವ ವದಂತಿಗಳನ್ನು ತಳ್ಳಿಹಾಕಿದ್ದು, ಇದು ಹತಾಶೆಯಿಂದ ಹುಟ್ಟಿಕೊಂಡ ವದಂತಿಯಾಗಿದ್ದು, ಒಂದು ರೀತಿಯ ಕೊಳಕು ರಾಜಕೀಯವಾಗಿದೆ ಎಂದಿದ್ದಾರೆ.

Advertisement

ನಾನು ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಟ್ವೀಟ್‌ ಮಾಡಿರುವ ಅವರು, ಬಾಲಿವುಡ್‌ನ‌ಲ್ಲಿ ಸ್ನೇಹಿತರು ಇರುವುದು ಅಪರಾಧವಲ್ಲ ಎಂದು ಅವರು ತಿಳಿಸಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಲಾಗಿದ್ದರೂ ನಾನು ಶಾಂತವಾಗಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಜಪೂತ್‌ ಸಾವನ್ನಪ್ಪಿರುವ ಹಿಂದಿನ ರಾತ್ರಿ ಯುವ ಸಚಿವರೊಬ್ಬರು ಪಾರ್ಟಿಯಲ್ಲಿದ್ದರು ಎಂದು ಆರೋಪಿಸಿರುವ ಬಿಜೆಪಿಯ ನಾಯಕರು, ರಾಜ್ಯ ಸರಕಾರದ ಜನಪ್ರಿಯತೆಯನ್ನು ನೋಡಿ ಅವರಿಗೆ ಹೊಟ್ಟೆನೋವು ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಆದಿತ್ಯ ಟ್ವೀಟ್‌
ನಾನು ಮಹಾರಾಷ್ಟ್ರ, ಶಿವಸೇನೆ ಮತ್ತು ಠಾಕ್ರೆ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಯಾವುದನ್ನೂ ಎಂದಿಗೂ ಮಾಡುವುದಿಲ್ಲ. ಹಿಂದೂ ಹೃದಯ ಸಾಮ್ರಾಟ್‌ ಬಾಳಾಸಾಹೇಬ್‌ ಠಾಕ್ರೆ ಅವರ ಮೊಮ್ಮಗ ಎಂದು ಹೇಳಲು ನಾನು ಬಯಸುತ್ತೇನೆ. ಆಧಾರರಹಿತ ಆರೋಪಗಳನ್ನು ಹೊರಿಸುತ್ತಿರುವ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಆದಿತ್ಯ ಮಂಗಳವಾರ ಸಂಜೆ ಟ್ವೀಟ್‌ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರಕಾರದ ವಿರುದ್ಧ ಪ್ರಮುಖರ ಆರೋಪ
ಸುಶಾಂತ್‌ ಅವರ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ಮಹಾರಾಷ್ಟ್ರ ಸರಕಾರ ಸಹಾಯ ಮಾಡಿದೆ ಎಂದು ಪ್ರಮುಖರು ಆರೋಪಿಸಿದ್ದಾರೆ. ತನಿಖೆಯಲ್ಲಿ ಯಾರನ್ನಾದರೂ ಉಳಿಸಲು ಮಹಾರಾಷ್ಟ್ರ ಸರಕಾರ ಪ್ರಯತ್ನಿಸುತ್ತಿದೆಯೇ ಎಂದು ಬಿಜೆಪಿಯ ಹಿರಿಯ ಮುಖಂಡ ನಾರಾಯಣ್‌ ರಾಣೆ ಆರೋಪಿಸಿದ್ದರು. ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಕೂಡ ಉದ್ಧವ್‌ ಠಾಕ್ರೆ ಅವರು ಬಾಲಿವುಡ್‌ ಮಾಫಿಯಾವನ್ನು ಮಹಾರಾಷ್ಟ್ರ ಸರಕಾರದ ಸಮ್ಮಿಶ್ರ ಪಾಲುದಾರರಾದ ಕಾಂಗ್ರೆಸ್‌ ಪಕ್ಷದೊಂದಿಗೆ ಅತ್ಯುತ್ತಮವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು
ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರ ತನಿಖೆ ಮತ್ತು ಬಿಹಾರ ಪೊಲೀಸರ ಬಗ್ಗೆ ಅಸಹಕಾರ ವರ್ತನೆ ಕುರಿತು ಮುಂಬಯಿ ಬಿಜೆಪಿ ನಿಯೋಗ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರನ್ನು ಭೇಟಿ ಮಾಡಿದೆ. ಈ ಸಂದರ್ಭ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರೊಂದಿಗೆ ರಾಜ್ಯ ಸರಕಾರ ಸಹಕಾರ ನೀಡದಿರುವ ಬಗ್ಗೆ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಸುಶಾಂತ್‌ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಶಿಕ್ಷಿಸಲು ರಾಜ್ಯ ಸರಕಾರ ಸಹಾಯ ಮಾಡಬೇಕು. ಮುಂಬಯಿ ಪೊಲೀಸರಿಂದ ತನಿಖೆಯು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next