Advertisement

ಸದ್ಯದ ರಾಜ್ಯ ರಾಜಕೀಯದ ಬಗ್ಗೆ ಮೌನ ವಹಿಸಿರುವೆ

06:00 AM Jul 08, 2018 | Team Udayavani |

ಬೆಂಗಳೂರು: “ಸದ್ಯದ ರಾಜಕೀಯ ಸನ್ನಿವೇಶಗಳ ಬಗ್ಗೆ ಮೌನ ವಹಿಸಿರುವುದಾಗಿ’ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಹೇಳಿದ್ದು ಮೌನದ ಹಿಂದಿನ ಮರ್ಮ ಏನಿರಬಹುದು ಎಂಬುದು ಕುತೂಹಲ ಮೂಡಿಸಿದೆ.

Advertisement

ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, “ರಾಜ್ಯ ರಾಜಕೀಯದ ಪ್ರಸ್ತುತ ಬೆಳವಣಿಗೆಗಳ ಕುರಿತು ಸದ್ಯಕ್ಕೆ ಮಾತನಾಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದು, ಸಮಯ ಬಂದಾಗ ಮಾಧ್ಯಮಗಳ ಮುಂದೆಯೇ
ಮೌನ ಮುರಿಯುತ್ತೇನೆ’ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಬರುವ ಮುನ್ನವೇ ಮಾತನಾಡುವುದಿಲ್ಲ ಎಂಬ ಷರತ್ತು ಹಾಕಿದ್ದೇನೆ. ಯಾಕೆಂದರೆ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಮಾತನಾಡಬಾರದು ಎಂದು ತೀರ್ಮಾನಿಸಿರುವ ಕಾರಣ ಈ ಷರತು ಹಾಕಿದ್ದೆ. ನನ್ನ ನೋವನ್ನು ಮರೆಯುವ ದಿನ ಬರುತ್ತದೆ. ಆಗ ಮಾಧ್ಯಮಗಳ ಮುಂದೆ ಬಂದು ಮೌನ ಮುರಿಯುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದರು.

ಪತ್ರಿಕಾ ರಂಗದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವುದು ಕಷ್ಟವಾಗಿದೆ. ಪತ್ರಕರ್ತರ ಮೇಲೆ ಹಲ್ಲೆ ನಡೆಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ.

ಹಲವು ಒತ್ತಡಗಳ ನಡುವೆ ಕೆಲಸ ಮಾಡಬೇಕಾಗಿದೆ. ರಾಜ್ಯ ಮತ್ತು ದೆಹಲಿಯ ಅನುಭವದಲ್ಲಿ ಇಂತಹ ಸಾಕಷ್ಟು ಘಟನೆಗಳನ್ನು ಕಂಡಿದ್ದೇನೆ.

Advertisement

1962ರಲ್ಲಿ ವಿಧಾನಸಭೆ ಪ್ರವೇಶ ಮಾಡಿದ್ದು, ಇಷ್ಟು ವರ್ಷದ ಅನುಭವದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಈ ವೇಳೆ ಯಾವ ಪತ್ರಿಕೆ,ಮಾಧ್ಯಮಗಳ ಮೇಲೆ ದಾಳಿಯಾಗಿದೆ ಎನ್ನುವುದು ಮತ್ತು ಯಾರ್ಯಾರು ಜೈಲಿಗೆ ಹೋಗಿದ್ದಾರೆ ಎಂಬುದರ ಬಗ್ಗೆ ಗೊತ್ತಿದ್ದು, ಸಮಯ ಬಂದಾಗ ಎಲ್ಲ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದಷ್ಟೇ ಹೇಳಿ ಕುಳಿತರು.

ಲೆಕ್ಕ ಹಾಕಿದ ಮಹಾನುಭಾವ ಯಾರು: ಆದರೆ, ಕಾರ್ಯಕ್ರಮದ ಬಳಿಕ ಸುದ್ದಿಗಾರರು ಸಾಲಮ ನ್ನಾ ಬಗ್ಗೆ ಪ್ರತಿಕ್ರಿಯೆಗಾಗಿ ಒತ್ತಾಯಿಸಿದಾಗ,ಸಾಲಮನ್ನಾದಿಂದ ಶೇ.34ರಷ್ಟು ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಲಾಭವಾಗಲಿದೆ ಎಂಬ ಲೆಕ್ಕಾಚಾರವು ಪ್ರಜ್ಞಾರಹಿತವಾದದ್ದು. ಯಾವ ಮಹಾನುಭಾವ ಈ ಲೆಕ್ಕಾಚಾರ ಮಾಡಿದನೋ ಗೊತ್ತಿಲ್ಲ. ಹಳೇ ಮೈಸೂರು ಭಾಗದ ನಾಲ್ಕೈದು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯ ಇದೆ. ಮಂಗಳೂರು, ಬೀದರ್‌ ಸೇರಿ ಇತರೆಡೆಗಳಲ್ಲಿ ಕೇವಲ ಒಕ್ಕಲಿಗರಿದ್ದಾರೆಯೇ? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿಯೇ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆಗಳನ್ನು ನೀಡಿದ್ದಾರೆ.ಅವುಗಳನ್ನು ಮುಂದುವರಿಸಲಾಗುತ್ತದೆ ಎಂದು ಬಜೆಟ್‌ನಲ್ಲಿಯೂ ತಿಳಿಸಲಾಗಿದೆ. ಇನ್ನು ಅನ್ಯಾಯ ಹೇಗೆ ಆಗಲಿದೆ ಎಂದು ಹೇಳಿ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next