ಜಂಭದ ಹುಡುಗಿ, ಜಂಭದ ಕೋಳಿ ಎಂದೆಲ್ಲಾ ಹುಡುಗರಿಂದ ಕರೆಸಿಕೊಂಡವಳು ನಾನು. ಅಂಥ ನನ್ನನ್ನೇ ಮೋಡಿ ಮಾಡಿ ಪ್ರೀತಿಯ ಬಲೆಗೆ ಕೆಡವಿಕೊಂಡೆಯಲ್ಲ; ನೀನು ಮಾಯ್ಕರ ಕಣೋ…
ಹಾಯ್ ಒಲವ ಹೂವೆ,
ಮುದ್ದು ಮೂಗಿನ ಚೆಲುವ… ಎಸ್ಟ್ ದಿನ ಆಯಿತು ನಿನ್ನ ನೋಡಿ? ಅದೇನೋ ತಾಳಲಾರದ ಚಡಪಡಿಕೆ, ತಿಳಿಯಲಾರದ ಹಂಬಲ ನಿನ್ನ ಬಳಿ ಮಾತನಾಡಲು. ಒಲವ ಸುಧೆಯನ್ನೇ ಈ ಬಡಪಾಯಿ ಹುಡುಗಿಯ ಮಡಿಲಿಗೆ ಸುರಿದೆಯಲ್ಲೋ ಹುಡುಗ.
ನಿಷ್ಕಲ್ಮಶ ಪ್ರೀತಿ ಪಡೆಯಲು ಅಪಾರ ಪುಣ್ಯ ಮಾಡಿರಬೇಕಂತೆ. ಆದ್ರೆ, ನಾನೇನೂ ಅಂಥ ಘನಂದಾರಿ ಕೆಲಸ ಮಾಡಿಲ್ಲ. ಆದ್ರೂ ನಿನ್ನ ಪ್ರೀತಿಯನ್ನು ಕರುಣಿಸಿರುವ ಆ ದೇವರಿಗೆ ಧನ್ಯವಾದ. ಅದೆಷ್ಟೇ ಬಿಕ್ಕಳಿಸುವ ನೋವುಗಳಿರಲಿ, ನಿನ್ನ ಅಗಾಧ ಪ್ರೀತಿಯ ಪರಿ ನೆನೆದಾಗ ಎಲ್ಲಾ ದುಃಖವೂ ಮೈ ಮರೆತು ಹೋಗುತ್ತೆ. ಅಂಥಾ ಮೋಡಿಗಾರ ನೀನು. ಮತ್ತೇನು ಬೇಕು ಈ ಅಶಾಶ್ವತ ಜೀವನಕ್ಕೆ?
ನಿನ್ನದು ಹುಚ್ಚು ಪ್ರೀತಿ ಎನಿಸಿದರೂ, ಕೊನೆ ಉಸಿರಿರೋವರೆಗೂ ಆ ಪ್ರೀತಿ ಮಳೆ ನನ್ನೆದೆಯಲ್ಲಿ ಸುರಿಯುತ್ತಿರಬೇಕು. ಇಷ್ಟೇ ಸಾಂದ್ರತೆಯ ಅನುರಾಗ ಜೀವನದುದ್ದಕ್ಕೂ ಬೇಕೆನಿಸುತ್ತದೆ. ನಿನ್ನ ಒಲವನ್ನು ಯಾರಿಗೂ ಬಿಟ್ಟು ಕೊಡಬಾರದೆಂಬ ಸ್ವಾರ್ಥ, ಇವನಿದ್ದ ಮೇಲೆ ನನಗೇಕೆ ಭಯ ಎಂದು ಯಾರಿಗೂ ಹೆದರದಷ್ಟು ಧೈರ್ಯ ಬಂದಿದೆ. ಅಷ್ಟೇ ಅಲ್ಲ, ನೀನು ಸಿಕ್ಕಿದ್ದರಿಂದ ವಿಪರೀತ ಎನಿಸುವಷ್ಟು ಕೊಬ್ಬೂ ಬಂದಿದೆ.
ಜಂಬದ ಹುಡುಗಿ ಅಂತ ಹುಡುಗರಿಂದ ನಾಮಕರಣಗೊಂಡ ನನ್ನನ್ನೇ ಪಳಗಿಸಿ ಪ್ರೀತ್ಸೋ ಹಾಗೆ ಮಾಡಿಕೊಂಡೆಯಲ್ಲ?! ಎಂದಿಗೂ ಸೋಲೊಪ್ಪದ ನನ್ನ ಅಚಲವಾದ ಕೆಲವು ನಿಲುವುಗಳನ್ನು ಬದಲಿಸಿ ನಿನ್ನಲ್ಲಿ ಬೀಳುವ ಹಾಗೆ ಮಾಡಿಕೊಂಡೆಯಲ್ಲ; ಏನಿದರ ಗುಟ್ಟು? ಹೇಳ್ಳೋ… ನಿನ್ನ ಅಂತಃಕರಣದ ನೈಜ ಪ್ರೀತಿಗೆ ನನ್ನೆಲ್ಲ ಹಮ್ಮು ಬಿಮ್ಮುಗಳೂ ಕರಗಿ ಹೋದವು. ಸೋತಿದ್ದಕ್ಕೆ ನನಗೇನೂ ಬೇಜಾರಿಲ್ಲ ಬಿಡು. ನಿನ್ನ ಪ್ರೀತಿ ದಕ್ಕಿತು ನೋಡು; ಅದೇ ಕಾರಣಕ್ಕೆ ನನ್ನ ಜಂಬ ಮತ್ತಷ್ಟು ಹೆಚ್ಚಿದೆ. ನನ್ನೆಲ್ಲಾ ತಪ್ಪುಗಳನ್ನು ಕ್ಷಮಿಸಿ ಮನಸ್ಸಿನಲ್ಲಿ ಜಾಗ ನೀಡಿದ್ದಕ್ಕೆ ನಿನಗೆ ಮತ್ತೂಮ್ಮೆ ತುಂಬಾ ಥ್ಯಾಂಕ್ಸ್.
ಇಂತಿ ನಿನ್ನ
ಲಂಬು
ಪಲ್ಲವಿ ಎಡೆಯೂರು