Advertisement

ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿ ನಾಸಾಕ್ಕೆ ಮಾಹಿತಿ ನೀಡಿದ್ದು ಯುವ ಇಂಜಿನಿಯರ್

09:52 AM Dec 04, 2019 | Team Udayavani |

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಪ್ರಮುಖ ಕೇಂದ್ರ ಬಿಂದುವಾಗಿದ್ದ ವಿಕ್ರಮ್ ಲ್ಯಾಂಡರ್ ಅವಶೇಷಗಳ ಇದ್ದ ಸ್ಥಳದ ಬಗ್ಗೆ ನಾಸಾಕ್ಕೆ ಮಾಹಿತಿ ನೀಡಿದ್ದು ಚೆನ್ನೈ ಮೂಲದ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ (33ವರ್ಷ).

Advertisement

ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷ ಯಾವ ಸ್ಥಳದಲ್ಲಿ ಇದೆ ಎಂಬ ಬಗ್ಗೆ ವಿಜ್ಞಾನಿಗಳು ಶೋಧ ನಡೆಸುತ್ತಿದ್ದರು. ಏತನ್ಮಧ್ಯೆ ಆ ಸ್ಥಳವನ್ನು ನಿಖರವಾಗಿ ಪತ್ತೆ ಹಚ್ಚಿರುವ ಷಣ್ಮುಗ ಈ ಮಾಹಿತಿಯನ್ನು ನಾಸಾಕ್ಕೆ ತಿಳಿಸಿದ್ದರು ಎಂದು ವರದಿ ತಿಳಿಸಿದೆ.

ಸೆಪ್ಟಂಬರ್ 6ರಂದು ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಮುನ್ನವೇ ದಕ್ಷಿಣ ಧ್ರುವದಲ್ಲಿ ಪತನಗೊಂಡು ಸಂಪರ್ಕ ಕಡಿದುಕೊಂಡಿತ್ತು. ಈ ಕುರಿತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳವಾರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಚಿತ್ರವನ್ನು ಬಿಡುಗಡೆ ಮಾಡಿದೆ.

ವಾಯುವ್ಯ ದಿಕ್ಕಿನ 750 ಮೀಟರ್ ಎತ್ತರದಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಷಣ್ಮುಗ ಸುಬ್ರಮಣಿಯನ್ ಅವರು ಪತ್ತೆ ಹಚ್ಚಿದ್ದು, ಮೊದಲ ಮೋಸೆಯಿಕ್ ಚಿತ್ರದಲ್ಲಿ ಒಂದು ಪ್ರಕಾಶಮಾನವಾದ ಪಿಕ್ಸೆಲ್ ಜತೆ ಸ್ಥಳವನ್ನು ಗುರುತಿಸಲಾಗಿತ್ತು ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ನಿಖರವಾಗಿ ಗುರುತಿಸಿದ ಮೊದಲ ವ್ಯಕ್ತಿ ಮಿಸ್ಟರ್ ಸುಬ್ರಮಣಿಯನ್. ನಾಸಾಕ್ಕೆ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲವಾಗಿತ್ತು. ತನ್ನ ಸ್ವ ಆಸಕ್ತಿಯ ಮೇಲೆ ಷಣ್ಮುಗ ಅವರು ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಿರುವುದಾಗಿ ವರದಿ ತಿಳಿಸಿದೆ.

Advertisement

ಲ್ಯಾಂಡರ್ ಅವಶೇಷಗಳನ್ನು ಪತ್ತೆ ಹಚ್ಚಿದ ಸ್ಥಳದ ಬಗ್ಗೆ ಷಣ್ಮುಗ ಅವರು ನಾಸಾಕ್ಕೆ ಇ-ಮೇಲ್ ಮೂಲಕ ತಿಳಿಸಿದ್ದರು. ಕೊನೆಗೆ ನಾಸಾ ಮತ್ತಷ್ಟು ಶೋಧ ಕಾರ್ಯ ನಡೆಸಿದ ನಂತರ ಸುಮಾರು ಎರಡು ತಿಂಗಳ ನಂತರ ಅಧಿಕೃತವಾಗಿ ಸ್ಥಳದ ಬಗ್ಗೆ ಘೋಷಿಸಿದೆ.

ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಹಚ್ಚಿರುವುದಕ್ಕೆ ನಾಸಾ ನನ್ನ ಗುರುತಿಸಿದೆ ಎಂದು ಷಣ್ಮುಗ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next