ಜ್ಯೂರಿಕ್: ಒಲಿಂಪಿಕ್ ಚಿನ್ನದ ವಿಜೇತ, ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಅವರು ತಾನು ಏಕಾಂಗಿಯಾಗಿದ್ದೇನೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಡೈಮಂಡ್ ಲೀಗ್ ನಂತಹ ದೊಡ್ಡ ಅಥ್ಲೆಟಿಕ್ಸ್ ಈವೆಂಟ್ ಗಳಲ್ಲಿ ಹೆಚ್ಚಿನ ಭಾರತೀಯ ಕ್ರೀಡಾಪಟುಗಳು ಭಾಗವಹಿಸಬೇಕು ನೀರಜ್ ಹೇಳಿದರು. 24ರ ಹರೆಯದ ನೀರಜ್ ಚೋಪ್ರಾ ಅವರು ಈ ವರ್ಷದ ಡೈಮಂಡ್ ಲೀಗ್ ಫೈನಲ್ ನಲ್ಲಿ ಭಾರತದ ಏಕೈಕ ಅಥ್ಲೀಟ್ ಆಗಿದ್ದರು. ಬೇರೆ ದೇಶಗಳು ಬರುವಂತೆ ಭಾರತ ತಂಡವಾಗಿ ಈ ಕಾರ್ಯಕ್ರಮಗಳಿಗೆ ಹೋದರೆ ತುಂಬಾ ಚೆನ್ನಾಗಿರುತ್ತದೆ ಎಂದು ನೀರಜ್ ಹೇಳಿದ್ದಾರೆ.
ಸ್ವಿಜರ್ ಲ್ಯಾಂಡ್ ನ ಜ್ಯೂರಿಕ್ ನಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ ಮೊದಲ ಪ್ರಶಸ್ತಿ ಪಡೆದ ನೀರಜ್ ಚೋಪ್ರಾ ಅವರು ಅಲ್ಲಿಂದ ಜೂಮ್ ಕಾಲ್ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದರು.
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಮನೆಯವರಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ: ಬೊಮ್ಮಾಯಿ ಘೋಷಣೆ
“ನಮ್ಮ ಅಥ್ಲಿಟ್ ಗಳು ವಿಶ್ವದರ್ಜೆಯ ಪ್ರದರ್ಶನ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸುವಂತೆ ನಮ್ಮ ಆಟಗಾರರನ್ನು ನಾವು ಪ್ರೋತ್ಸಾಹ ನೀಡಬೇಕು. ನಾನೊಬ್ಬನೇ ಇಂತಹ ದೊಡ್ಡ ಕೂಟಗಳಲ್ಲಿ ಭಾಗವಹಿಸುವಾಗ ನನಗೆ ಬೇಸರ ಮೂಡುತ್ತದೆ. ಭಾರತದ ಪರವಾಗಿ ನಾನು ಒಬ್ಬನೇ ಇದ್ದೆ. ಮುಂದಿನ ಕೆಲ ವರ್ಷಗಳಲ್ಲಿ ಡೈಮಂಡ್ ಲೀಗ್ ನಲ್ಲಿ ಭಾರತದ ಹೆಚ್ಚಿನ ಆಟಗಾರರು ಆಡುತ್ತಾರೆಂಬ ನಂಬಿಕೆಯಿದೆ. ಹೀಗಾದರೆ ನಾವು ಒಟ್ಟಾಗಿ ಗೆಲ್ಲಬಹುದು” ಎಂದು ನೀರಜ್ ಹೇಳಿದರು.