“ನನ್ನ ಬಾಯಿಯನ್ನು ನಾನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬೇರೆಯವರ ಬಾಯಿಯನ್ನು ನಾನು ತಡೆಯೋಕ್ಕಾಗುತ್ತಾ…’ – ಹೀಗೆ ಕೊಂಚ ಬೇಸರದಲ್ಲೇ ಹೇಳಿಕೊಂಡರು ನಟ ಕಿರಣ್ ರಾಜ್ (Kiran Raj). ಈ ಮಾತಿಗೆ ಕಾರಣ ಇತ್ತೀಚೆಗೆ ನಡೆದ ಅಪಘಾತ ಹಾಗೂ ಆ ನಂತರ ಕೇಳಿಬಂದ ಮಾತು.
ನಟ ಕಿರಣ್ ರಾಜ್ ಅವರ “ರಾನಿ’ ಚಿತ್ರ (Ronny Movie) ಸೆ.12ರಂದು ತೆರೆಕಂಡಿದೆ. ಆದರೆ, ಸೆ.10 ರಂದು ರಾತ್ರಿ ಅವರ ಕಾರು ಅಪಘಾತವಾಗಿ, ಕಿರಣ್ ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೇ, ಇದು ಸಿನಿಮಾ ಪ್ರಚಾರದ ಗಿಮಿಕ್ ಎಂಬ ಮಾತು ಕೇಳಿಬಂದಿತ್ತು. ಈ ಮಾತು ಕಿರಣ್‌ಗೆ ಗಾಯದ ಜೊತೆಗೆ ಮತ್ತಷ್ಟು ನೋವು ಕೊಟ್ಟಿದೆ.
ಈ ಕುರಿತು ಮಾತನಾಡಿದ ಅವರು, “ಎಲ್ಲರಿಗೂ ನೋಡೋ ನೋಟ ಎರಡು ಇರುತ್ತೆ. ನಮಗೆ ಯಾವುದು ಬೇಕೋ ಅದರ ಕಡೆ ಗಮನ ಕೊಡಬೇಕು. ಅಪಘಾತವನ್ನು ಸಿನಿಮಾ ಗಿಮಿಕ್ ಅಂತ ಹೇಳ್ಳೋಕೆ ಆಗಲ್ಲ. ಸಿನಿಮಾ ಪ್ರಮೋಶನ್ ಸಮಯದಲ್ಲಿ ಎಲ್ಲರಿಗೂ ಕಮರ್ಷಿಯಲ್ ಕೊಟ್ಟಿರುತ್ತೇವೆ. ಹೀಗಿರುವಾಗ ಈ ರೀತಿಯ ಪ್ರಚಾರ ಯಾಕ್ ಬೇಕು? ಈ ತರ ಗಿಮಿಕ್‌ನಿಂದ 100 ಟಿಕೆಟ್ ಸೇಲ್ ಅಗುತ್ತೆ ಅಂದ್ರೆ ಒಂದರ್ಥಇದೆ. ಗಿಮಿಕ್‌ನಿಂದ ಜನ ಥಿಯೆಟರ್‌ಗೆ ಬರಲ್ಲ. ನ್ಯೂಸ್ ನೋಡಬಹುದು. ಸಿನಿಮಾ ನೋಡಲ್ಲ. ಗಿಮಿಕ್ ಮಾಡೋದಾಗಿದ್ದರೆ ಬ್ಯಾಂಡೇಜ್ ಅನ್ನು ಎದೆ ಮೇಲೆ ಹಾಕಿಕೊಂಡು, ಕುಂಟುತ್ತಾ ಬರುತ್ತಿದ್ದೆ. ಎರಡು ವರ್ಷದ ಶ್ರಮವನ್ನು ತೆರೆಮೇಲೆ ನೋಡುವ ಸಮಯದಲ್ಲಿ ಅಪಘಾತದ ಗಿಮಿಕ್ ಮಾಡಿ ಆಸ್ಪತ್ರೆಯಲ್ಲಿ ಇಂಜೆಕ್ಷನ್, ಮಾತ್ರೆ ತಗೊಂಡು ಮಲಗುವ ಅಗತ್ಯ ನನಗೇನಿದೆ’ ಎಂದು ಪ್ರಶ್ನೆ ಮಾಡುತ್ತಾರೆ.
“ಅಭಿಮಾನಿಗಳು ಎಷ್ಟೋ ಜನ ಬಂದು ದಾರ ಕಟ್ಟಿದ್ದಾರೆ. ನನ್ನ ಲಾಭಕ್ಕೊಸ್ಕರ ಬೇರೆಯವರ ಭಾವನೆಗಳ ಜೊತೆ ಆಟ ಆಡಲ್ಲ. ನಾನು ನಟನೆಯಿಂದ ಎಷ್ಟು ಜನರಿಗೆ ಗೊತ್ತೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಆದರೆ ಒಂದಷ್ಟು ಆಶ್ರಮ ಗಳಿಗೆ ಬೇರೆ ಬೇರೆ ಕೆಲಸಗಳಿಂದ ಪರಿಚಯ ಇದ್ದೀನಿ. ಈ ವಿಚಾರ ಗೊತ್ತಾದರೆ ಅವರಿಗೆ ಎಷ್ಟು ನೋವು ಆಗುತ್ತೆ ಅನ್ನೋದು ಗೊತ್ತಿದೆ’ ಎಂದು ತುಂಬಾ ಸ್ಪಷ್ಟವಾಗಿ ಮಾತನಾಡಿದರು.