Advertisement

ಜೆಡಿಎಸ್‌ನಲ್ಲಿ ನನಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ

08:59 PM Jun 01, 2019 | Team Udayavani |

ಮೈಸೂರು: ರಾಜ್ಯಾಧ್ಯಕ್ಷನಾಗಿದ್ದರೂ ಪಕ್ಷದೊಳಗೆ ತಮಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೋಲಿಗೆ ನಮ್ಮ ದುರಂಹಕಾರವೇ ಕಾರಣ ಎಂದು ಕ್ಷೇತ್ರದ ಶಾಸಕರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಪುರಸಭೆ ಚುನಾವಣೆಯಲ್ಲಿ ಸೋಲುಂಟಾದ ಹಿನ್ನೆಲೆಯಲ್ಲಿ ಶನಿವಾರ ಕೆ.ಆರ್‌.ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿ ನಮ್ಮದೇ ವಾರ್ಡ್‌ನಲ್ಲಿ ತಾನು ಶಿಫಾರಸು ಮಾಡಿದ ವ್ಯಕ್ತಿಗೆ ಟಿಕೆಟ್‌ ನೀಡಲಿಲ್ಲ. ಜೆಡಿಎಸ್‌ ನಾಯಕರಿಗೆ ಹಣ ಬಲವೇ ಮುಖ್ಯವಾಗಿದ್ದು, ಹಣದಿಂದಲೇ ಗೆಲ್ಲಬಹುದು ಎಂಬ ನಮ್ಮ ಅಹಂಕಾರಕ್ಕೆ ಜನತೆ ಸೋಲಿನ ಪಾಠ ಕಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷನಾಗಿ ತಾನು ಹೇಳಿದ ಒಬ್ಬರಿಗೆ ಟಿಕೆಟ್‌ ನೀಡಲಿಲ್ಲ ಎಂದರೆ ಹೇಗೆ. ಚುನಾವಣೆ ಗೆಲ್ಲಲು ಹಣ ಬಲವೇ ಮುಖ್ಯ ಎನ್ನುವ ನಿಮ್ಮ ದುರಂಹಕಾರದ ಮನೋಭಾವವನ್ನು ಇನ್ನಾದರೂ ಬಿಡಿ, ಇದು ತನ್ನ ಆಗ್ರಹವಲ್ಲ ವಿನಂತಿ ಎಂದಿದ್ದಾರೆ.

ಚುನಾವಣೆಯಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಪ್ರಾತಿನಿಧ್ಯ ಸಿಗಬೇಕು. ಆದರೆ, ಕೆ.ಆರ್‌.ನಗರ ಪುರಸಭೆ ಚುನಾವಣೆ ಹೊಣೆ ಹೊತ್ತಿದ್ದ ಸಾ.ರಾ.ಮಹೇಶ್‌, ಕುರುಬ ಸಮಾಜಕ್ಕೆ ಒಂದೇ ಒಂದು ಟಿಕೆಟ್‌ ಕೊಡಿ ಎಂಬ ತಮ್ಮ ಮಾತನ್ನು ಧಿಕ್ಕರಿಸಿದ್ದಾರೆ. ಕೆ.ಆರ್‌.ನಗರದಲ್ಲಿ ಒಂದೇ ಸಮುದಾಯದವರಿಲ್ಲ. ಇಲ್ಲಿ ಕುರುಬರು, ಕುಂಬಾರರು, ಉಪ್ಪಾರರು ಸೇರಿದಂತೆ ಎಲ್ಲಾ ಜಾತಿ-ಜನಾಂಗದವರೂ ಇದ್ದಾರೆ. ಈ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿ, ಕಳೆದ 40 ವರ್ಷಗಳಿಂದ ರಾಜ್ಯದ ರಾಜಕಾರಣ ನೋಡುತ್ತಿದ್ದೇನೆ. ಪುರಸಭೆಯ ಹಲವು ಚುನಾವಣೆಗಳನ್ನು ನೋಡಿದ್ದೇನೆ.

ಕ್ಷೇತ್ರದಲ್ಲಿ ನಿಮ್ಮ ಗೆಲುವಿನಲ್ಲಿ ಕುರುಬ ಸಮಾಜದ ಪಾತ್ರವೂ ಇದೆ. ಅದು 10, 20, ನೂರು ಮತಗಳು ನಿಮಗೆ ಬಿದ್ದಿದೆಯೋ ಅದು ಬೇರೆ ಮಾತು. ನಿಮಗೆ ಕುರುಬ ಸಮಾಜವೂ ಮತ ನೀಡಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ಸಾ.ರಾ.ಮಹೇಶ್‌ರಿಗೆ ಮಾತಿನ ಮೂಲಕ ತಿವಿದರು.
ತನ್ನ ಜೊತೆಗೆ ಜೆಡಿಎಸ್‌ ಸೇರಿದವರು ನಿಮ್ಮ ಗೆಲುವಿಗೆ ರೂವಾರಿಗಳಾಗಲಿಲ್ಲವೇ? ಈ ದ್ವೇಷ ರಾಜಕಾರಣ ಬಿಡಿ, ದ್ವೇಷ ರಾಜಕಾರಣ ಒಳ್ಳೆಯದಲ್ಲ. ಅದರಿಂದ ಅಧಿಕಾರ ಪಡೆಯಲಾಗಲ್ಲ.

ಜನತಂತ್ರ ವ್ಯವಸ್ಥೆಯ ಭಾರತದಲ್ಲಿ ಯಾವುದೇ ಜಾತಿ, ಜನಾಂಗ, ಧರ್ಮ, ಭಾಷಿಕರ ಭವಿಷ್ಯದ ಬೀಗದ ಕೈ ಯಾವುದೆಂದರೆ ರಾಜಕೀಯ ಅಧಿಕಾರ, ದೇವರಾಜ ಅರಸರು ಅದನ್ನು ಅಕ್ಷರಶಃ ಪಾಲಿಸಿದವರು ಎಂದು ನೆನೆದ ವಿಶ್ವನಾಥ್‌, ನಿಮ್ಮ ನಡವಳಿಕೆಯಿಂದಲೇ ಪುರಸಭೆ ಚುನಾವಣೆಯಲ್ಲಿ ಸೋತಿದ್ದೇವೆ.

Advertisement

ಇನ್ನಾದರೂ ದ್ವೇಷ ರಾಜಕಾರಣ ಬಿಡಿ ಎಂದು ಸಚಿವ ಸಾ.ರಾ.ಮಹೇಶ್‌ಗೆ ಕಿವಿಮಾತು ಹೇಳಿದರು. ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ಕುರುಬ ಸಮಾಜಕ್ಕೆ ಸೇರಿದ ಒಬ್ಬರೇ ಒಬ್ಬರಿಗೆ ಜೆಡಿಎಸ್‌ ಟಿಕೆಟ್‌ ನೀಡಲಿಲ್ಲ. ನಮ್ಮ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ.

ಸ್ಪಷ್ಟನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶ್ವನಾಥ್‌, ಸಚಿವ ಸಾ.ರಾ.ಮಹೇಶ್‌ ದೌಲತ್ತು, ಹಣ ಬಲದಿಂದ ಏನು ಮಾಡಲು ಆಗಲ್ಲ ಎಂದು ಹೇಳಿದ್ದು ನಿಜ. ತಾನು ಮಾತನಾಡಿದ್ದು ಸಚಿವ ಸಾ.ರಾ. ಮಹೇಶ್‌ ವಿರುದ್ಧವೇ ವಿನಹಃ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೋವು ಚುನಾವಣೆಯಲ್ಲಿ ತೋರಿಸಿದ್ದಾರೆ…: ಒಳ್ಳೆಯ ಮನಸ್ಸಿನಲ್ಲಿ ರಾಜಕಾರಣ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಗೆದ್ದಿದ್ಯಾಕೆ? ಅವರಲ್ಲಿರುವ ಒಳ್ಳೆಯ ಮನಸ್ಸಿನಿಂದ ಎಂಬುದನ್ನು ಇನ್ನಾದರೂ ತಿಳಿದುಕೊಳ್ಳಿ. ಕೆ.ಆರ್‌.ನಗರದಲ್ಲಿ ಮಂತ್ರಿಗಳಿದ್ದೂ ಲೋಕಸಭೆ ಚುನಾವಣೆ, ಪುರಸಭೆ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದೆ. ಕೆಲವು ಜಾತಿಗಳನ್ನು ನೇರವಾಗಿ ಧಿಕ್ಕರಿಸಿದ್ದರಿಂದ ಅವರ ಮನಸ್ಸಿಗೆ ನೋವಾಗಿದೆ. ಅದನ್ನು ಚುನಾವಣೆಯಲ್ಲಿ ತೋರಿಸಿದ್ದಾರೆಂದು ಸಚಿವ ಸಾ.ರಾ.ಮಹೇಶ್‌ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಕಿಡಿಕಾರಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ತಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯರಾದ ಎಚ್‌.ವಿಶ್ವನಾಥ್‌ರಿಗೆ ರಾಜಕಾರಣದಲ್ಲಿ 40 ವರ್ಷಗಳ ಅನುಭವವಿದೆ. ನಮ್ಮಂತವರಿಗೆ ಸಲಹೆ-ಸೂಚನೆ ನೀಡುವ ಸಂಪೂರ್ಣ ಹಕ್ಕು ಅವರಿಗಿದೆ. ಅವರ ಸಲಹೆ-ಸೂಚನೆಗಳಲ್ಲಿ ಸತ್ಯಾಂಶಗಳಿದ್ದರೆ ಸರಿಪಡಿಸಿಕೊಳ್ಳುತ್ತೇನೆ.
-ಸಾ.ರಾ.ಮಹೇಶ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next