Advertisement

ನನಗೆ ವಿಷ ಬೇಡ, ಅಮೃತ ಕೊಡಿ: ಮುಖ್ಯಮಂತ್ರಿ ಕುಮಾರಸ್ವಾಮಿ

02:34 AM Mar 15, 2019 | |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು  ಅತ್ಯಂತ ಗಂಭೀರ ವಾಗಿ ಪರಿಗಣಿಸಿದಂತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ,  ಜಿಲ್ಲೆಯ ಜನರನ್ನು ನಂಬಿ ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನನಗೆ ವಿಷ ಕೊಡಬೇಡಿ. ಅಮೃತ ಕೊಡಿ ಎನ್ನುವ ಮೂಲಕ ಮತದಾರರನ್ನು  ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿದ್ದಾರೆ. 
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು,  ರಾಜಕೀಯವಾಗಿ ನನಗೆ ಶಕ್ತಿ ತಂದುಕೊಟ್ಟ ಜಿಲ್ಲೆಯ ಜನರನ್ನು ನಂಬಿದ್ದೇನೆ. ಮಗನನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಕೊಡಿ ಎಂದು ಮನವಿ ಮಾಡಿದರು.

Advertisement

 ನೀವು ನನ್ನನ್ನು ಕೈ ಹಿಡಿಯಿರಿ. ನಾನು ನಿಮ್ಮನ್ನು ಉಳಿಸುತ್ತೇನೆ. ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿ, ನಿಮ್ಮನ್ನು ಉಳಿಸುವ ಶಕ್ತಿ ಕೊಡಿ. ನೀವೇ ನಮ್ಮನ್ನು ಬೆಳೆಸಿದವರು. ನಾನು ಎಂದಿಗೂ ನಿಮಗೆ ದ್ರೋಹ ಮಾಡುವುದಿಲ್ಲ ಎಂದರಲ್ಲದೆ,  ಹಾಸನ ಜನರು ದೇವೇಗೌಡರ ಕೈ ಬಿಟ್ಟಾಗ, ನೀವು ಅವರ  ಕೈ ಹಿಡಿದಿದ್ದೀರಿ. ನೀವೇ ನಮ್ಮನ್ನು ಬೆಳೆಸಿದವರು. ಇಂದು ನೀವೇ ಗೋ-ಬ್ಯಾಕ್‌ ಎಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.  

ಮೊಮ್ಮಕ್ಕಳನ್ನು ರಾಜಕೀಯಕ್ಕೆ ತಂದಿರುವುದು ವ್ಯಾಮೋಹದಿಂದ ಅಲ್ಲ. ಅದು ಕುಟುಂಬ ರಾಜಕಾರಣವೂ ಅಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರಿಬ್ಬರ ಬಗ್ಗೆ ನನಗೆ ನಂಬಿಕೆ ಇದೆ. ಕುಟುಂಬ ಬೆಳೆಸಬೇಕೆಂಬ ಸ್ವಾರ್ಥ ನನ್ನಲ್ಲಿ ಇಲ್ಲ. ವಂಶ ಪಾರಂಪರ್ಯ ರಾಜಕಾರಣವೂ ಅಲ್ಲ. ಯಾರ ಬಗ್ಗೆಯೂ ನಾನು ನಿಂದಿಸುವುದಿಲ್ಲ ಎಂದು ಮಾಜಿ ಪ್ರಧಾನಿ  ಎಚ್‌.ಡಿ. ದೇವೇಗೌಡ ಹೇಳಿದರು.

ಇನ್ಮುಂದೆ ಅಳದಿರಲು ನಿರ್ಧರಿಸಿದ್ದೇನೆ
ಕಣ್ಣೀರು ಹಾಕಿ ರಾಜ ಕೀಯ ಮಾಡಬೇಕಿಲ್ಲ. ಅದು ನಮಗೆ ಬರುವುದೂ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿ ದರು. ನಾಟಕಕ್ಕಾಗಿ, ರಾಜ ಕೀಯ ಕಾರಣಕ್ಕಾಗಿ ಕಣ್ಣೀರು ಹಾಕಿ ಮಾಡಬೇಕಾದ್ದು ಏನೂ ಇಲ್ಲ. ನಾನೊಬ್ಬ ಭಾವನಾತ್ಮಕ ಜೀವಿ. ಭಾವನೆಗಳಿಗೆ ಬೆಲೆ ಕೊಡುವಂಥ ವ್ಯಕ್ತಿ. ಕಷ್ಟದಲ್ಲಿರುವವರನ್ನು ಕಂಡಾಗ ಸಹಜವಾಗಿಯೇ ಕಣ್ಣೀರು ಬರುತ್ತದೆ. ಅದನ್ನು ನಾಟಕವೆಂದರೆ ಹೇಗೆ? ಅದಕ್ಕಾಗಿ ನಾನು ಇನ್ನು ಮುಂದೆ ಅಳದಿರಲು ನಿರ್ಧರಿಸಿದ್ದೇನೆ ಎಂದರು.

ಮೈತ್ರಿಕೂಟ ಅಭ್ಯರ್ಥಿ ಘೋಷಣೆ ವೇಳೆ ಕಾಂಗ್ರೆಸಿಗರ ಗೈರು

Advertisement

ಮಂಡ್ಯ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಯಾಗಿ ನಿಖಿಲ್‌  ಕುಮಾರಸ್ವಾಮಿ ಘೋಷಣೆ ಮಾಡುವ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರೆಲ್ಲರೂ ಗೈರು ಹಾಜರಾಗಿದ್ದರು. ಕಾಂಗ್ರೆಸ್‌ ಪಕ್ಷದ ಯಾವೊಬ್ಬ ಸ್ಥಳೀಯ ಮುಖಂಡರು, ಕಾರ್ಯಕರ್ತರು ಕಾಣಿಸಿಕೊಳ್ಳದಿರುವುದು ಮೈತ್ರಿಗೆ ಅಪಸ್ವರವಿರುವುದು ಕಂಡುಬಂದಿತು.

ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮ ಸ್ಥಳದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಬಾವುಟ ಗಳನ್ನು ಕಟ್ಟಲಾಗಿತ್ತು. ಆದರೆ, ಕಾಂಗ್ರೆಸ್‌ ಪಕ್ಷದ ಜಿಲ್ಲಾ ಮಟ್ಟದ ನಾಯಕರು, ಮುಖಂಡರು, ಕಾರ್ಯಕರ್ತರುಕಂಡುಬರಲಿಲ್ಲ. ಜೆಡಿಎಸ್‌ ವರಿಷ್ಠರು ಹಾಗೂ ನಾಯಕರೇ ವೇದಿಕೆ ಮೇಲೆ ತುಂಬಿಹೋಗಿದ್ದರು. ಮೈತ್ರಿಗೆ ಮೇಲ್ಮಟ್ಟದ ನಾಯಕರಲ್ಲಷ್ಟೇ ಒಲವಿದ್ದು, ಸ್ಥಳೀಯ ಮಟ್ಟದಲ್ಲಿ ಅದು ನಿರೀಕ್ಷಿತ ಫ‌ಲ ನೀಡುತ್ತಿಲ್ಲದಿರುವುದು ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next