ಲವ್ ಅಟ್ ಫಸ್ಟ್ ಸೈಟ್ ಅನ್ನೋ ಮಾತು ಆ ಕ್ಷಣದಲ್ಲಿ ನಿಜವಾಗಿ, ನಾನು ನಿನ್ನನ್ನೇ ಹಿಂಬಾಲಿಸಿ ಹೋಗುವಂತಾಯ್ತು. ಅದ್ಯಾವ ಜನ್ಮದ ಪುಣ್ಯವೋ, ನೀನು ಸೀದಾ ಹೋಗಿ ನನ್ನದೇ ಕ್ಲಾಸ್‌ನಲ್ಲಿ ಕುಳಿತುಕೊಂಡೆ. ಆಹಾ, ಇಬ್ಬರೂ ಒಂದೇ ಕ್ಲಾಸು!
ಒಲುಮೆಯ ಗೆಳತಿಗೆ, ಕಾಲೇಜು ಶುರುವಾದ ಮೊದಲ ದಿನ ನಾನು ಅನ್ಯಗ್ರಹದ ಜೀವಿಯಂತೆ ಓಡಾಡುವಾಗ. ವೆಸ್ಪಾ ಗಾಡಿಯಲ್ಲಿ ತಿಳಿ ನೀಲಿ ಬಣ್ಣದ ಚೂಡಿದಾರ ಹಾಕಿದ ಮೂಗುತಿ ಸುಂದರಿಯೊಬ್ಬಳು ಓಪನ್ ಹೇರ್ ಬಿಟ್ಟಕೊಂಡು ಸಿನಿಮೀಯ ಸ್ಟೈಲ್‌ನಲ್ಲಿ ಹಾದು ಹೋದಳು. ಅದು ಬೇರ್ಯಾರೂ ಅಲ್ಲ, ನೀನೇ. ಲವ್ ಅಟ್ ಫಸ್ಟ್ ಸೈಟ್ ಅನ್ನೋ ಮಾತು ಆ ಕ್ಷಣದಲ್ಲಿ ನಿಜವಾಗಿ, ನಾನು ನಿನ್ನನ್ನೇ ಹಿಂಬಾಲಿಸಿ ಹೋಗುವಂತಾಯ್ತು.
ಅದ್ಯಾವ ಜನ್ಮದ ಪುಣ್ಯವೋ, ನೀನು ಸೀದಾ ಹೋಗಿ ನನ್ನದೇ ಕ್ಲಾಸ್‌ನಲ್ಲಿ ಕುಳಿತುಕೊಂಡೆ. ಆಹಾ, ಇಬ್ಬರೂ ಒಂದೇ ಕ್ಲಾಸು! ಆದರೆ, ನಿನ್ನ ಹೆಸರೇನೆಂದು ನನಗೆ ಗೊತ್ತಿರಲಿಲ್ಲ. ತರಗತಿಯಲ್ಲಿ ಬೇರೆ ಯಾರ ಪರಿಚಯವವೂ ಇರಲಿಲ್ಲ. ಮೊದಲ ತರಗತಿಯಲ್ಲಿ ಸರ್ ಬಂದು, ಎಲ್ಲರೂ ಪರಿಚಯ ಮಾಡಿಕೊಳ್ಳಿ ಅಂದಾಗ, ನಿನ್ನ ಸರದಿ ಬರುವುದನ್ನೇ ಕಾಯುತ್ತಾ ಕೂತಿದ್ದೆ ನಾನು. ಆಗ ನಿನ್ನ ಹೆಸರು ಗೊತ್ತಾಯ್ತು.
ಮುಂದೆ ನಾನೇ ಅನೇಕ ಅನ್ವೇಷಣೆಗಳ ಮೂಲಕ ನಿನ್ನ ಜಾತಕವನ್ನೆಲ್ಲ ತಿಳಿದುಕೊಂಡೆ. ಅಷ್ಟೊತ್ತಿಗಾಗಲೇ ನೀನು ನನ್ನ ಕನಸಿನ ಮೇಲೆ ಆಳ್ವಿಕೆ ಮಾಡಲು ಶುರು ಮಾಡಿ ಆಗಿತ್ತು. ನಿನ್ನನ್ನು ಮಾತನಾಡಿಸಲು ದಂಡಿಯಾಗಿ ಅವಕಾಶಗಳು ಸಿಕ್ಕರೂ, ಎಲ್ಲದರಲ್ಲೂ ನಾನು ವಿಫಲನಾದೆ. ನೀನು ಎದುರಿಗೆ ಸಿಕ್ಕಾಗ, ಪ್ರತಿದಿನ ನಿನ್ನನ್ನು ನೋಡುವಾಗ ನನ್ನಲ್ಲೆನೋ ಹೊಸ ಉಲ್ಲಾಸ, ಉತ್ಸಾಹ. ನನಗೆ ನಿನ್ನ ಮೇಲೆ ಪ್ರೀತಿ ಅಂತಾರಲ್ಲ, ಅದಾಗಿದೆ ಅಂತ ಗೊತ್ತಾಯ್ತು. ನೀನು ಎದುರು ಬಂದಾಗ ಇದ್ದಕ್ಕಿದ್ದಂತೆ ಎದೆ ಬಡಿತ ಜಾಸ್ತಿಯಾಗುತ್ತಿತ್ತು.
ಹೀಗೆ ಕಾಲೇಜು ಶುರುವಾಗಿ ನಾಲ್ಕೈದು ತಿಂಗಳು ಕಳೆದರೂ ಬುಕ್, ನೋಟ್ಸ್ ವಿಷಯಕ್ಕೆ ಒಂದೆರಡು ಬಾರಿ ಬಿಟ್ಟರೆ, ನಾನು- ನೀನು ಮುಖಾಮುಖೀ ಮಾತಾಡಿದ್ದೇ ಇಲ್ಲ. ನೀನು ನನ್ನ ಕಡೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ನಾನು ನಿನ್ನನ್ನು ಇಷ್ಟ ಪಡುವ ವಿಷಯ, ನನ್ನ ಜೀವದ ಗೆಳೆಯನಿಗೆ ಬಿಟ್ಟರೆ ಬೇರಾರಿಗೂ ಗೊತ್ತಿರಲಿಲ್ಲ. ನಿನ್ನ ಜೊತೆ ಮಾತನಾಡಲೂ ಹೆದರುವವನಿಗೆ, ಪ್ರಪೋಸ್ ಮಾಡುವ ಧೈರ್ಯ ಎಲ್ಲಿಂದ ಬಂದೀತು ಹೇಳು?
ಅದೇನೋ ಗೊತ್ತಿಲ್ಲ, ನಿನ್ನನ್ನು ಕಂಡರೆ ಅವ್ಯಕ್ತ ಭಯ. ಹೀಗಾಗಿ ನಿನ್ನಲ್ಲಿ ನೇರವಾಗಿ ಹೇಳಬೇಕೆಂದಿರುವ ವಿಷಯವನ್ನು ಈ ಪತ್ರದಲ್ಲಿ. ಬರೆದು ನಿನ್ನ ಬ್ಯಾಗಿನಲ್ಲಿ ಇಟ್ಟಿದ್ದೇನೆ. ಇದನ್ನು ಓದಿದ ನಂತರ ನಿನಗೂ ನಾನು ಇಷ್ಟವಾಗಿದ್ದರೆ ನಾಳೆ ಅದೇ ತಿಳಿ ನೀಲಿ ಬಣ್ಣದ ಚೂಡಿದಾರ ಹಾಕಿಕೊಂಡು ಬಾ. ನೀ ಬರುವ ದಾರಿಯನ್ನೇ ಕಾಯುತ್ತಿರುವೆ..
ಇಂತಿ ನಿನ್ನ ಪ್ರೇಮಿ
* ಫರ್ಮಾನ್