ಹೊಸದಿಲ್ಲಿ: ಪಾಕಿಸ್ಥಾನದ ಹೆಸರೆತ್ತದೆ ಭಯೋತ್ಪಾದನೆಗೆ ಪ್ರಚೋದನೆ ನೀಡುವ ರಾಷ್ಟ್ರವನ್ನು ಮುಂಬರುವ ವಿಶ್ವಕಪ್ ಕೂಟದಿಂದ ಹೊರಗಿಡಿ ಎನ್ನುವ ವಿಷಯದಲ್ಲಿ ಐಸಿಸಿ ಭಾರತದ ಮನವಿಯನ್ನು ತಳ್ಳಿ ಹಾಕಿತ್ತು. ಪಾಕಿಸ್ಥಾನದ ಹೆಸರನ್ನು ನಿರ್ದಿಷ್ಟವಾಗಿ ಬಿಸಿಸಿಐ ಪತ್ರದಲ್ಲಿ ಉಲ್ಲೇಖೀಸಿಲ್ಲ. ಇದೇ ಕಾರಣದಿಂದ ಭಾರತದ ಮನವಿಯನ್ನು ಐಸಿಸಿ ತಿರಸ್ಕರಿಸಿತು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಹಂಗಾಮಿ ಅಧ್ಯಕ್ಷ ಅಮಿತಾಬ್ ಚೌಧರಿ, “ಐಸಿಸಿಗೆ ನಾನು ಯಾವುದೇ ಪತ್ರ ಬರೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಐಸಿಸಿಗೆ ಪತ್ರ ಬರೆದಿದ್ದು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ. ಅವರು ಆಡಳಿತಾಧಿಕಾರಿ ಮುಖ್ಯಸ್ಥರ ಸಲಹೆ ಪಡೆದುಕೊಂಡು ಐಸಿಸಿಗೆ ಪತ್ರ ಐಸಿಸಿಗೆ ಬರೆದಿದ್ದಾರೆ. ಪತ್ರದಲ್ಲಿ ಆಟಗಾರರ ಭದ್ರತೆ ಬಗ್ಗೆ ನಾವು ಮುಖ್ಯವಾಗಿ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಇತ್ತೀಚೆಗೆ ಉಗ್ರರು ನಡೆಸಿದ ಪುಲ್ವಾಮ ದಾಳಿಯಲ್ಲಿ ಭಾರತದ 40 ಸಿಆರ್‌ಪಿಎಫ್ ಸೈನಿಕರು ಹತರಾಗಿದ್ದರು. ಇದರಿಂದಾಗಿ ಭಾರತ ವಿಶ್ವಕಪ್‌ನಲ್ಲಿ ಪಾಕ್ ಜತೆಗೆ ಕ್ರಿಕೆಟ್ ಬಹಿಷ್ಕರಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಪಾಕ್ ಅನ್ನು ಹೊರಗಿಡುವಂತೆ ಪಾಕ್ ಹೆಸರೆತ್ತದ ಪತ್ರದಲ್ಲಿ ಮನವಿ ಮಾಡಿತ್ತು.
ವೀಸಾ ಸಮಸ್ಯೆ ಎದುರಾಗದು
ಈ ಬೆನ್ನಲ್ಲೇ 2021 ಹಾಗೂ 2023ಕ್ಕೆ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಕೂಟಗಳಲ್ಲಿ ಪಾಲ್ಗೊಳ್ಳಲು ಭಾರತದ ವೀಸಾ ಖಚಿತತೆಯ ಬಗ್ಗೆ ದುಬಾೖಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಪ್ರಶ್ನೆ ಎತ್ತಿದೆ.
ಸಭೆಯಲ್ಲಿ ಪಿಸಿಬಿ ಅಧ್ಯಕ್ಷರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್, “ಭಾರತ ಆತಿಥ್ಯದಲ್ಲಿ 2021ಕ್ಕೆ ನಡೆಯಲಿರುವ ವಿಶ್ವಕಪ್ ಟಿ20 ಮತ್ತು 2023ಕ್ಕೆ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಪಾಲ್ಗೊಳ್ಳುವ ಪಾಕಿಸ್ಥಾನ ತಂಡಕ್ಕೆ ವೀಸಾ ಸಮಸ್ಯೆ ಎದುರಾಗುವುದಿಲ್ಲ. ಈ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ತಾನು ಆಯೋಜಿಸುವ ಕೂಟಗಳಲ್ಲಿ ಪಾಲ್ಗೊಳ್ಳಲು ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ’ ಎಂದು ಭರವಸೆ ನೀಡಿದರು.