ಮೈಸೂರು: ರಾಮನಗರ ಜಿಲ್ಲೆ ಮಾಡಿದವನು, ಜಿಲ್ಲೆಯ ಅಭಿವೃದ್ಧಿ ಮಾಡಿದವನು ನಾನು ಇಲ್ಲಿದ್ದೀನಿ. ಅವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಂಸದ ಡಿ.ಕೆ.ಸುರೇಶ್- ಸಚಿವ ಅಶ್ವತ್ಥ ನಾರಾಯಣ ಕಿತ್ತಾಟ ವಿಚಾರವಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿಗೆ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ಟರು. ಎಂಟು ವರ್ಷ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ. ಐದು ವರ್ಷ ಕಾಂಗ್ರೆಸ್ ಸರ್ಕಾರವಿತ್ತು. ಅವರಿಬ್ಬರೂ ಏನು ಮಾಡಿದ್ರು? ನಾನು ಅನುಮೋದನೆ ಮಾಡಿದ್ದ ಆಸ್ಪತ್ರೆ ಕಟ್ಟಿಸಿದ್ದರೆ ಕೋವಿಡ್ ಸಂದರ್ಭದಲ್ಲಿ ಎಷ್ಟು ಪ್ರಾಣ ಉಳಿಸಬಹುದಿತ್ತು ಎಂದರು.
ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆಗಳನ್ನು ಜೀರ್ಣಿಸಿಕೊಳ್ಳುವುದು ಯಾವ ಲೆಕ್ಕ. ನೀವು ರಾಮನಗರ ಜಿಲ್ಲೆಯ ಕಲ್ಲು ಬಂಡೆಗಳನ್ನು ಜೀರ್ಣಿಸಿಕೊಂಡವರು. ಮೇಕೆದಾಟು ಯೋಜನೆಗದ ಡಿಪಿಆರ್ ಮಾಡಿಸಿದವನು ನಾನು. ನಿತಿನ್ ಗಡ್ಕರಿ ಅವರಿಗೆ ಡಿಪಿಆರ್ ಸಲ್ಲಿಸಿ ಅನುಮೋದನೆ ಪಡೆದುಕೊಂಡವನು ನಾನು. ಆಗ ನೀವು ನನ್ನೊಟ್ಟಿಗೆ ದೆಹಲಿಗೆ ಬಂದಿದ್ದೀರಾ ಎಂದು ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ರಾಮನಗರ: ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಡಿಕೆ ಸುರೇಶ್, ಅಶ್ವತ್ಧ ನಾರಾಯಣ ಜಟಾಪಟಿ
ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೊರಟ್ಟಿದ್ದೀರಿ. ನಾನು ನಿಮ್ಮ ವಿಡಿಯೋಗಳನ್ನ ನೋಡಿದ್ದೇನೆ. ಮದುವೆಗೂ ಮುನ್ನ ಗಂಡು ಹೆಣ್ಣು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನೀವು ಪ್ರಿ ಪಾದಯಾತ್ರೆ ಫೋಟೋ ಶೂಟ್ ಮಾಡಿಸಿದ್ದೀರಿ. ಚಾಮರಾಜನಗರದಿಂದ ಕಬ್ಬಿನ ಜ್ಯೂಸ್ ಬರಬೇಕಂತೆ. ಭಾಗವಹಿಸಿದವರಿಗೆ ಸರ್ಟಿಫಿಕೆಟ್ ಕೊಡುತ್ತಾರಂತೆ. ನಿಮ್ಮ ಹೈಟೆಕ್ ಪಾದಯಾತ್ರೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದರು.