Advertisement
ಪ್ರತಿ ಬಾರಿ ನೀ ಸೋತಾಗಲೂ, ಗೆಲುವು ನನ್ನದೇ ಎಂದು ಸಂಭ್ರಮಿಸುತ್ತಿ. ಈಗದರ ನೆನಪಾದರೂ ಬಿಕ್ಕಿ ಬಿಕ್ಕಿ ಅತ್ತುಬಿಡುತ್ತೇನೆ. ನನ್ನನ್ನು ನೀನದೆಷ್ಟು ಪ್ರೀತಿಸಿದ್ದೆ ಎಂಬುದು ಬಹುಶಃ ನಿನ್ನಳತೆಗೂ ಸಿಕ್ಕಿರಲಿಕ್ಕಿಲ್ಲ. ನಿನ್ನದ್ಯಾವತ್ತೂ ಅಪರೂಪದ ಪ್ರೀತಿಯೇ ಬಿಡು. ನೀನು ಪ್ರೀತಿಸುವ ರೀತಿಗೆ, ಪ್ರೀತಿಯಂಥ ಪ್ರೀತಿಗೇ ನಿನ್ನ ಮೇಲೊಮ್ಮೆ ಅಸೂಯೆಯಾಗಿದ್ದರೂ ಆಶ್ಚರ್ಯವಿಲ್ಲ.
ಅದೇ ಕೊನೆ: ಆನಂತರದಲ್ಲಿ ನಿನ್ನ ಕಿರುಬೆರಳು ಸಹ ನನ್ನನ್ನು ತಾಕುವ ದೊಡ್ಡ ಮನಸ್ಸು ಮಾಡಲೇ ಇಲ್ಲ, ಅಲ್ಲೇನೋ ನೀನು, ಸೋತುಬಿಟ್ಟೆ. ಅವಳ ಗೆಲುವಿಗೆ ಕಾರಣನಾಗಿಬಿಟ್ಟೆನೆಂದು ಹಿಗ್ಗಿಬಿಟ್ಟಿದ್ದೆ, ಆದರೆ ಆ ನನ್ನ ಸಣ್ಣ ಪ್ರಶ್ನೆಯನ್ನೂ ನೀನು ಅದೆಷ್ಟು ಸೂಕ್ಷ್ಮವಾಗಿ ತೆಗೆದುಕೊಂಡುಬಿಟ್ಟಿದ್ದೆ. ಎಂಬ ಮಹಾ ಪ್ರಶ್ನೆಯೊಂದು ಈ ಕ್ಷಣಕ್ಕೂ ಪ್ರಶ್ನೆಯಾಗೇ ಉಳಿದುಬಿಟ್ಟಿದೆ. ಪ್ರೀತಿಸುವುದೆಂದರೆ ಒಬ್ಬರಿಗೊಬ್ಬರು ಹಾತೊರೆಯುತ್ತಾ, ದೇಹದ ಬಯಕೆಯ ಬಿಸಿಗೆ ತುಪ್ಪ ಸುರಿಯುವುದಲ್ಲ, ಪ್ರೀತಿಸುವವರ ಸಂತೋಷಕ್ಕಾಗಿ ಇಹಪರದ ಸುಖವನ್ನೆಲ್ಲಾ ತ್ಯಾಗ ಮಾಡಿ ಪ್ರೀತಿಸುತ್ತಲೇ ಬದುಕುವುದೆಂದು ಸಾಬೀತುಪಡಿಸಿಬಿಟ್ಟೆ. ನೀನೀಗ ಕಣ್ಣೆದುರಿಗೆ ಇದ್ದಿದ್ದರೆ ನಿನ್ನ ಪಾದಗಳ ಮೇಲೆ ನನ್ನ ಹಣೆ ಇಟ್ಟು ಕಣ್ಣೀರ ಅಭಿಷೇಕ ಮಾಡಿಬಿಡುತ್ತಿದ್ದೆ. ಯಾವತ್ತೋ ಮಾಡಿದ ಆ ಸಣ್ಣ ತಪ್ಪಿನ ಅರಿವಾಗಿ ಈ ಕ್ಷಣಕ್ಕೂ ಪಶ್ಚಾತ್ತಾಪದ ಬೇಗೆಯಲ್ಲೇ ಬೇಯುತ್ತಿದ್ದೇನೆ. ಸಾಧ್ಯವಾದರೆ ಅಲ್ಲಿಂದಲೇ ಈ ನಿನ್ನ ನತದೃಷ್ಟ ಪ್ರೇಮಿಯನ್ನು ಕ್ಷಮಿಸಿಬಿಡು. ಅದೇನೋ ನಿನ್ನ ಹಾಗೆ ಪ್ರೀತಿಸಲು ನಾನಿನ್ನೂ ಕಲಿತೇ ಇಲ್ಲ, ಈ ಜನ್ಮಕ್ಕದು ಸಾಧ್ಯವೂ ಇಲ್ಲ ಎನ್ನಿಸುತ್ತದೆ. ಇದೇ ಕಾರಣಕ್ಕೋ ಏನೋ ನೀ ನನಗೆ ದಕ್ಕದೆ ಅಲ್ಲೆಲ್ಲೋ ಬದುಕಿನ ಅರ್ಧದಾರಿಯಲ್ಲೇ ಹಿಂತಿರುಗಿಯೂ ನೋಡದೆ ಹೊರಟು ಹೋದದ್ದು. ನೀನಷ್ಟೇ ದೂರ ಹೋದದ್ದು, ನಿನ್ನ ನೆನಪುಗಳಿನ್ನೂ ನನ್ನ ಪ್ರತಿಕ್ಷಣದ ಉಸಿರಿಗೆ ಕಾರಣವಾಗಿ ಇಲ್ಲೇ ನನ್ನೊಂದಿಗೆ ಉಳಿದುಬಿಟ್ಟಿವೆ. ಮುಂದಿನ ಜನ್ಮದಲ್ಲಾದರೂ ಉಸಿರ ಸಮೇತ ಇಡಿಯಾಗಿ ನನಗೊಬ್ಬಳಿಗೇ ದಕ್ಕಿಬಿಡು, ಈ ಜನ್ಮದ ನನ್ನ ಆರಾಧನೆಗೆ ಸಿಕ್ಕ ವರವೆಂದು ಕಣ್ಣಿಗೊತ್ತಿಕೊಂಡು ಕಾಪಿಟ್ಟುಕೊಳ್ಳುತ್ತೇನೆ.
Related Articles
Advertisement