Advertisement
ಹುಡುಗನೊಬ್ಬ ವಯಸ್ಸಿನ ಗಡಿ ದಾಟಿ ತರುಣನಾದರೆ ಮೀಸೆ ಮೂಡುತ್ತದೆ. ಸರಿ. ಆದರೆ, ಇವನೊಬ್ಬ ಗಡಿ ದಾಟಿದರೆ ನನಗ್ಯಾಕೆ ಮೀಸೆ ಆಸೆ ಮೂಡಬೇಕು? ಇವನೊಬ್ಬ ಗಡಿ ದಾಟಿದ್ದರಿಂದ ದೇಶದ ಜನರು ಜಾತಿ, ಮತ, ಭಾಷೆ, ಅಂತಸ್ತಿನ ಗಡಿಗಳನ್ನು ದಾಟಿ, ಭಾರತೀಯರೆಲ್ಲರೂ ಒಂದೇ ಎಂಬುದನ್ನು ಸಾರಿಬಿಟ್ಟರು. ಇದೇ ಭಾರತೀಯತೆ! ಧನ್ಯವಾದಗಳು ಅಭಿನಂದನ್ ವರ್ತಮಾನ್.
Related Articles
Advertisement
ನಂಗ್ಯಾಕೆ ಮೀಸೆಯ ಮೇಲೆ ಇಷ್ಟೊಂದು ಮೋಹ? ಮೀಸೆ ಹಿಂದೆಂದೂ ಅಪರಿಚಿತವಾಗಿರಲಿಲ್ಲ. ಆದರೆ, ಇಷ್ಟು ಅಪ್ಯಾಯಮಾನವೂ ಆಗಿರಲಿಲ್ಲ. ಕನ್ನಡಿ ಮುಂದೆ ಅಪ್ಪ ಮೀಸೆ ಕತ್ತರಿಸುವಾಗ ಪರೀಕ್ಷಕಿಯಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೈಗೆ ಕತ್ತರಿ ತೆಗೆದುಕೊಂಡು, ಆ ಕಡೆ ಎರಡು, ಈ ಕಡೆ ನಾಲ್ಕು ಕೂದಲನ್ನು ಕತ್ತರಿಸಿ ಬ್ಯಾಲೆನ್ಸ್ ಮಾಡುವಾಗ ಹುಟ್ಟಿದ ಹೆಮ್ಮೆಯ ಪ್ರೀತಿ, ಜೊತೆಜೊತೆಯಲ್ಲಿ ಆಟವಾಡುತ್ತಾ ಬೆಳೆದ ಹುಡುಗರು ಚಿಗುರುಮೀಸೆಯ ನವತರುಣರಾಗಿ ಎದುರು ನಿಂತಾಗ ಕಿಚ್ಚು ಹತ್ತಿಸಿದ ಪ್ರೇಮ, ಮುತ್ತು ಕೊಟ್ಟರೆ ಕೆಟ್ಟು ಹೋಗುತ್ತೀನೇನೋ ಎಂಬಂತೆ ಮೀಸೆ ಮೇಲೆ ಅತಿ ಕಾಳಜಿಯಿಂದ ಮುತ್ತಿಡುತ್ತಾ ಕಡೆಗದು ಮದುವೆ ಬಂಧನದೊಳಗೆ ಸಿಕ್ಕಿಕೊಂಡ ನಂತರ, “ಮುತ್ತು ಕೊಟ್ಟರೆ ಮೀಸೆ ಅಡ್ಡ ಬರುತ್ತಪ್ಪ’ ಎಂಬ ಹುಸಿಮುನಿಸಿನ ಪ್ರೇಮದಾಟದ ಯೌವನ ಪ್ರೀತಿ, ಮಡಿಲಲ್ಲಿದ್ದ ಗಂಡು ಮಗುವಿಗೆ ಐ ಬ್ರೋ ಪೆನ್ಸಿಲ್‌ನಿಂದ ಪುಟ್ಟದಾಗಿ ಮೀಸೆ ಬರೆದು ನಕ್ಕಾಗ ಉಕ್ಕಿದ ಮಮತೆ, ಬೆಳೆದು ನಿಂತ ಮಗ ಕನ್ನಡಿಯಲ್ಲಿ ಇಣುಕಿ ಮೀಸೆ ಸರಿಪಡಿಸಿಕೊಳ್ಳುವಾಗ ಮೂಡಿದ ವಾತ್ಸಲ್ಯ… ಮೀಸೆ ಪ್ರೇಮಕ್ಕೆ ಪುರಾವೆಗಳು ಒಂದೇ ಎರಡೇ? ಆದರೆ, ಇವೆಲ್ಲವನ್ನೂ ಮೀರಿ ಭಾರತದಷ್ಟೇ ಅಗಾಧವಾಗಿ ಕಂಡಿದ್ದು ಈ ಅಭಿನಂದನ್ ಮೀಸೆ.
ಅರ್ಥವಾಯಿತು! ಈ ಮೀಸೆಯ ಆಸೆ ಬೆಂಕಿಯಂತೆ ನನ್ನೊಳಗೆ ಹೇಗೆ ಆವರಿಸಿಕೊಂಡಿತು ಎಂದು. ಆಸೆ ಮೀಸೆಯದ್ದಲ್ಲ, ಅದರೊಳಗಿನ ತ್ಯಾಗ, ಬಲಿದಾನ, ಸಾಮರ್ಥ್ಯದ್ದು. ನಾವು ಊಹಿಸಿಕೊಳ್ಳಲೂ ಆಗದಂಥ ಕೆಲಸವನ್ನು ನಮ್ಮ ಸೈನಿಕರು ಮಾಡುತ್ತಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ಸಾವನ್ನು ಗೆದ್ದು ಬಂದ ವೀರ ಅಭಿನಂದನ್ ಮೀಸೆ ನಮ್ಮೆಲ್ಲರ ದೇಶಭಕ್ತಿಯ, ಗೆಲುವಿನ ಸಂಕೇತ. ನಾನೂ ಮೀಸೆ ಧರಿಸಿದ ಹೆಣ್ಣಾಗಿ ಹೆಮ್ಮೆಯಿಂದ ನನ್ನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ.
ರೇಖಾರಾಣಿ