Advertisement

ನಾನು ರಾಜಾಜಿನಗರದ ಜನರ ಮನೆ ಮಗ: ಸುರೇಶ್‌ಕುಮಾರ್‌

11:49 AM May 01, 2018 | |

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾಲ್ಕು ಬಾರಿ ಶಾಸಕರಾಗಿರುವ ಎಸ್‌.ಸುರೇಶ್‌ ಕುಮಾರ್‌ ಅವರು ಐದನೇ ಬಾರಿ ಗೆಲುವಿಗಾಗಿ ಕಣಕ್ಕಿಳಿದಿದ್ದಾರೆ. ಮತಯಾಚನೆಗಾಗಿ ಪ್ರತಿ ಬೂತ್‌ ವ್ಯಾಪ್ತಿಯ  ಮನೆ ಮನೆ ಭೇಟಿ ನೀಡಿರುವ ಅವರು ಪ್ರಚಾರಕ್ಕಾಗಿ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ತಂಡ ರಚನೆ ಮಾಡಿಕೊಂಡಿದ್ದಾರೆ. ಪ್ರಚಾರದ ನಡುವೆಯೇ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ನಾನು ರಾಜಾಜಿನಗರ ಕ್ಷೇತ್ರದ ಮನೆಯ ಮಗ. ದಿನದ 24 ಗಂಟೆ ಜನರ ಸೇವೆಯೇ ನನ್ನ ಗುರಿ ಎಂದು ಹೇಳುತ್ತಾರೆ.

Advertisement

* ಚುನಾವಣಾ ಪ್ರಚಾರ ಹೇಗಿದೆ?
ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ. ಕ್ಷೇತ್ರದ 197 ಬೂತ್‌ಗಳಲ್ಲಿ ಸುಮಾರು 125 ಬೂತ್‌ ವ್ಯಾಪ್ತಿಯ ಎಲ್ಲಾ ಮನೆಗೂ ಭೇಟಿ ನೀಡಿದ್ದೇವೆ. ಪ್ರತಿ ಮನೆಯಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಹಾಗೂ ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಜನರ ಮುಂದಿಡುತ್ತಿದ್ದೇವೆ. 

* ರಾಜಾಜಿನಗರಕ್ಕೆ ಬಿಜೆಪಿಯಿಂದ ಹಲವರು ಟಿಕೆಟ್‌ ಆಕಾಂಕ್ಷಿಗಳು ಇದ್ದರಲ್ಲವೇ?
ಕ್ಷೇತ್ರದಲ್ಲಿ ಬಿಜೆಪಿ ಕಾರ್ಪೊರೇಟರ್‌ ಹಾಗೂ ಮಾಜಿ ಕಾರ್ಪೊರೇಟ್‌ಗಳಲ್ಲಿ  ಕೆಲವರು ತಾವೇ ಅಭ್ಯರ್ಥಿಯಾಗಬೇಕು ಎಂದು ಹಠ ಹಿಡಿದಿದ್ದರು. ಆದರೆ, ಪಕ್ಷದಿಂದ ಟಿಕೆಟ್‌ ಘೋಷಣೆಯಾದ ನಂತರ ಎಲ್ಲರೂ ಒಟ್ಟಿಗಿದ್ದೇವೆ. ಪಕ್ಷದ ಗೆಲುವಿಗಾಗಿ ದುಡಿಯುತ್ತಿದ್ದಾರೆ. ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ಒಮ್ಮತದಿಂದ ಕೆಲಸ ಮಾಡುತ್ತಿದ್ದೇವೆ.

* ಐದನೇ ಬಾರಿ ಗೆಲುವಿಗೆ ನಿಮ್ಮ ತಂತ್ರವೇನು?
ಚುನಾವಣಾ ಪ್ರಚಾರಕ್ಕೆ ಎರಡು ತಂಡಗಳನ್ನು ರಚನೆ ಮಾಡಿದ್ದೇವೆ. ನಿತ್ಯವೂ ಮನೆ ಮನೆ ಬೇಟಿ ಮಾಡುತ್ತಿದ್ದಾರೆ. ಇದಲ್ಲದೇ ಮಹಿಳಾ ಮತ್ತು ಪುರುಷ ತಂಡ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದೆ. ಪಕ್ಷದ ಸೂಚನೆಯಂತೆ ಪ್ರತಿ ವಾರ್ಡ್‌ನಲ್ಲೂ ಪೇಜ್‌ ಪ್ರಮುಖ್‌ ಜತೆಗೆ ರಸ್ತೆ ಪ್ರಮುಖ್‌ ಕೂಡ ನೇಮಿಸಿದ್ದೇವೆ. ಆಯಾ ರಸ್ತೆಗೆ ಒಬ್ಬರನ್ನು ಪ್ರಮುಖರನ್ನಾಗಿ ಮಾಡಿದ್ದೇವೆ. ರಸ್ತೆ ವ್ಯಾಪ್ತಿಯ ಎಲ್ಲಾ ಮನೆಗಳ ಮತವನ್ನು ಬಿಜೆಪಿಗೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವರಿಗೆ ವಹಿಸಲಾಗಿದೆ. ಸಾಂ ಕ ಹೋರಾಟ ನಡೆಯುತ್ತಿದೆ. ಈ ಬಾರಿಯೂ ರಾಜಾಜಿನಗರದಲ್ಲಿ ಕಮಲ ಅರಳಿದೆ.

* ನಿಮ್ಮ ಮುಂದಿನ ಯೋಜನೆಗಳೇನು?
ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ರಸ್ತೆ ನಿರ್ಮಾಣವಾಗುತ್ತಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಟ್ರಾಫಿಕ್‌ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಒಕಳಿಪುರಂ ಕಾರಿಡಾರ್‌ ಕೂಡ ಅತಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಇನ್ನಷ್ಟು ಆದ್ಯತೆ ನೀಡಲಿದ್ದೇವೆ. ಮಾದರಿ ಕ್ಷೇತ್ರವಾಗಿ ರೂಪಿಸಲು ಬೇಕಾದ ಎಲ್ಲಾ ರೀತಿಯ ಯೋಜನೆ ಸಿದ್ಧಪಡಿಸಿಕೊಳ್ಳುತ್ತಿದ್ದೇವೆ.

Advertisement

* ನಾಲ್ಕು ಬಾರಿ ಶಾಸಕರಾಗಿ ನಿಮ್ಮ ಸಾಧನೆ ಏನು?
ರಾಜ್ಯದಲ್ಲೇ ಮೊದಲ ಬಾರಿಗೆ ರಾಜಾಜಿನಗರದಲ್ಲಿ 3ಡಿ ತಂತ್ರಜ್ಞಾನ ಆಧಾರಿತ ಡಯಾಲಿಸಿಸ್‌ ಕೇಂದ್ರವನ್ನು ಆರಂಭಿಸಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ನಮ್ಮ ಮೊದಲ ಆದ್ಯತೆಯಾಗಿದ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉಚಿತ ಕೋಚಿಂಗ್‌ ನೀಡಲಾಗಿದೆ. ಇದು ಸಾಕಷ್ಟು ಬಡ ಕುಟುಂಬದ ಮಕ್ಕಳಿಗೆ ಉಪಯೋಗವಾಗಿದೆ. ರಸ್ತೆಗಳ ಅಭಿವೃದ್ಧಿ, ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ನೀಡುತ್ತಿದ್ದೇವೆ. ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ಬಸ್‌ ನಿಲ್ದಾಣ ಹೀಗೆ ನೂರಾರು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next