ಜೈಪುರ: ರಜಪೂತ ಕರ್ಣಿಸೇನೆಯ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಯನ್ನು ತಾನೇ ಮಾಡಿರುವುದಾಗಿ ಪಾತಕಿ ರೋಹಿತ್ ಗೊಡಾರ ಹೊಣೆ ಹೊತ್ತುಕೊಂಡಿದ್ದಾನೆ. ಈ ಬಗ್ಗೆ ಆತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾನೆ. ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗುಂಪಿನ ಸದಸ್ಯನಾಗಿರುವ ರೋಹಿತ್ ಗೊಡಾರ, ಕೆನಡಾ ಮೂಲದ ಕುಖ್ಯಾತ ಗೋಲ್ಡಿ ಬ್ರಾರ್ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಸುಖದೇವ್ ಅವರ ಹತ್ಯೆ ಖಂಡಿಸಿ ರಾಜಸ್ಥಾನದಾದ್ಯಂತ ರಜಪೂತ ಕರ್ಣಿಸೇನೆ ಬಂದ್ ನಡೆಸಿದೆ. ಇದರಿಂದ ಇಡೀ ರಾಜಸ್ಥಾನದ ಸ್ಥಿತಿ ಗಂಭೀರವಾಗಿತ್ತು.
ಇತ್ತೀಚೆಗೆ ರೋಹಿತ್ ಗೊಡಾರ, ಛತ್ತೀಸ್‌ಗಢದ ಬಿಲಾಸ್‌ಪುರದ ಉದ್ಯಮಿ, ಮಾಜಿ ನಗರಸಭೆ ಸದಸ್ಯ ರಾಕೇಶ್ ಶರ್ಮ ಅವರಿಗೆ 1 ಕೋಟಿ ರೂ.ಗಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ರಾಕೇಶ್ ಶರ್ಮ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಆರೋಪಿಗಳ ಗುರುತು ಪತ್ತೆ: ಸುಖದೇವ್ ಅವರ ಮೇಲೆ ಗುಂಡು ಹಾರಿಸಿದ್ದ ಇಬ್ಬರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಂದೂಕುಧಾರಿಗಳನ್ನು ಮಕ್ರಾನಾ ನಾಗೌರ್‌ನ ನಿವಾಸಿ ರೋಹಿತ್ ರಾಥೋಡ್ ಹಾಗೂ ಹರ್ಯಾಣದ ಮಹೇಂದ್ರಗಢದ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ. ಜೈಪುರದಲ್ಲಿರುವ ಸುಖದೇವ್ ಅವರ ನಿವಾಸಕ್ಕೆ ಆಗಮಿಸಿದ್ದ ಈ ಇಬ್ಬರು ಆರೋಪಿಗಳು, ಅವರೊಂದಿಗೆ ಟೀ ಸೇವಿಸುತ್ತಾ, ಮಾತುಕತೆ ನಡೆಸುವ ನಾಟಕ ಮಾಡಿ, ಪಾಯಿಂಟ್ ಬ್ಲಾಕ್ ರೇಂಜ್‌ನಲ್ಲಿ ಸುಖದೇವ್ ಅವರ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಿದ್ದರು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇವರಿಗೆ ಆರೋಪಿ ನವೀನ್ ಶೆಖಾವತ್ ಎಂಬಾತ ಸಹಾಯ ಮಾಡಿದ್ದ.
ಆರೋಪಿ ನವೀನ್ ಮೂರು ದಿನಗಳ ಹಿಂದೆ ಪ್ರತಿ ದಿನಕ್ಕೆ 5,000 ರೂ. ಬಾಡಿಗೆಯಂತೆ ಏಜೆನ್ಸಿ ಒಂದರಿಂದ ಎಸ್‌ಯುವಿ ಕಾರು ಪಡೆದಿದ್ದ. ಹತ್ಯೆಯ ನಂತರ ಸುಖದೇವ್ ಅವರ ನಿವಾಸದ ಬಳಿಯೇ ಕಾರನ್ನು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದರು.
ಎಸ್‌ಐಟಿ ರಚನೆ: ಆರೋಪಿಗಳನ್ನು ಬಂಧಿಸಲು ರಾಜಸ್ಥಾನ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ ಆರೋಪಿಗಳ ಬಗ್ಗೆ ಸುಳಿವು ನೀಡುವವರಿಗೆ 5 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಡಿಜಿಪಿ ಉಮೇಶ್ ಮಿಶ್ರಾ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದ್ದಾರೆ.