Advertisement

ಅನುದಾನ ವಾಪಸ್‌ ಹೋಗಿದ್ದಕ್ಕೆ ನಾನು ಕಾರಣನಲ್ಲ

09:38 PM Nov 12, 2019 | Lakshmi GovindaRaju |

ಕೆ.ಆರ್‌.ನಗರ: ತಾಲೂಕಿನ ಕೆಲವು ಗ್ರಾಮಗಳಿಗೆ ಮಂಜೂರಾದ ಕಾಮಗಾರಿಗಳ ಅನುದಾನ ತಾಂತ್ರಿಕ ಕಾರಣಗಳಿಂದ ಬಿಡುಗಡೆಯಾಗಿರಲಿಲ್ಲ. ಆದರೆ, ಇದಕ್ಕೆ ನಾನೇ ಕಾರಣ ಎಂಬುದಾಗಿ ಕೆಲವರು ಗಾಳಿ ಸುದ್ದಿಯನ್ನು ಕೆಲವರು ಹಬ್ಬಿಸುತ್ತಿದ್ದು. ಇದಕ್ಕೆ ಯಾರೂ ಕಿವಿಗೊಡಬಾರದು. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

Advertisement

ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗಳಿಗೆ ತ್ವರಿತವಾಗಿ ಚಾಲನೆ ನೀಡಲಾಗುವುದು ಎಂದರು.

ಮತ್ತೆ ಮಂಜೂರಾತಿಗೆ ಯತ್ನ: ತಾಲೂಕಿಗೆ ಮಂಜೂರಾದ ಅನುದಾನ ವಾಪಸ್‌ ಹೋಗಿರುವ ಕೆಲಸಗಳಿಗೆ ಮತ್ತೆ ಆಡಳಿತಾತ್ಮಕ ಮಂಜೂರಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಸಾ.ರಾ.ಮಹೇಶ್‌, ಎರಡು ದಿನಗಳ ಹಿಂದೆ ಅನುದಾನ ವಾಪಸ್‌ ಹೋಗಿರುವ ಕಾಮಗಾರಿಗಳ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಆ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಸಹೋದರತ್ವದಿಂದ ನೋಡಿ: ರಾಜಕೀಯ ಜೀವನದಲ್ಲಿ ತಾವು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಆದರೂ ಕೆಲವು ವರ್ಗದವರು ತಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅದನ್ನು ಬಿಟ್ಟು ಸಹೋದರತ್ವದಿಂದ ನೋಡಬೇಕು ಎಂದು ಮನವಿ ಮಾಡಿದರು. ಚುನಾವಣೆ ಸಮಯ ಬಂದಾಗ ನಿಮಗಿಷ್ಟ ಬಂದವರಿಗೆ ಮತ ಹಾಕಿರಿ.

ಆದರೆ, ಬೇರೆ ಸಮಯದಲ್ಲಿ ಪರಸ್ಪರ ಸೌಹಾರ್ದತೆಯಿಂದ ಬದುಕು ನಡೆಸಿ ಗ್ರಾಮದ ಅಭಿವೃದ್ದಿಯ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ ಶಾಸಕರು, ಚೀರ್ನಹಳ್ಳಿ ಗ್ರಾಮ ಪರಿಮಿತಿಯ ಮೂರು ರಸ್ತೆಗಳಿಗೆ 30 ಲಕ್ಷ ರೂ. ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಿದು,ª ಮುಂದಿನ ದಿನಗಳಲ್ಲಿ ಅಗತ್ಯವಿರುವಷ್ಟು ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಕನ್ಯ, ಉಪಾಧ್ಯಕ್ಷ ಕೋಳಿ ಕುಮಾರ್‌, ತಾಪಂ ಮಾಜಿ ಉಪಾಧ್ಯಕ್ಷರಾದ ಉಮೇಶ್‌, ಲಕ್ಷ್ಮೀ ಕನಕರಾಜು, ಮಾಜಿ ಸದಸ್ಯ ನಾಗಣ್ಣ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಜೆ.ಶಿವಣ್ಣ, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಹೆಚ್‌.ಆರ್‌.ಮಧುಚಂದ್ರ, ಉಪಾಧ್ಯಕ್ಷ ಕಾಂತರಾಜು, ಎಪಿಎಂಸಿ ಮಾಜಿ ಉಪಾಧ್ಯಕ್ಷ ನಂಜುಂಡಸ್ವಾಮಿ,

ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌, ಗುತ್ತಿಗೆದಾರರಾದ ಮಹದೇವ್‌, ಎಚ್‌.ಪಿ.ಸುರೇಂದ್ರ, ರಮೇಶ್‌, ತಹಶೀಲ್ದಾರ್‌ ಎಂ.ಮಂಜುಳಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌.ರಮೇಶ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್‌, ಸಹಾಯಕ ಅಭಿಯಂತರ ಶಿವಪ್ರಸಾದ್‌, ಮೋಹನ್‌ ಮತ್ತಿತರರು ಹಾಜರಿದ್ದರು.

ಕಾಮಗಾರಿ ನಡೆಸದ್ದಕ್ಕೆ ಸಿದ್ದುಗೆ ದೂರು: ಕೆ.ಆರ್‌.ನಗರ ತಾಲೂಕು ಅಭಿವೃದ್ಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಹಲವು ಕಾಮಗಾರಿಗಳಿಗೆ ಚಾಲನೆ ದೊರೆತಿಲ್ಲ. ಕೆಲ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಪರಾಜಿತರಾಗಿದ್ದ ಜಿಪಂ ಸದಸ್ಯ ಡಿ.ರವಿಶಂಕರ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು ದೂರಿದ್ದರು.

ಅಲ್ಲದೇ ಈ ಸಂಬಂಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಜೊತೆಗೆ ತಾಲೂಕಿನಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಮುಖಂಡರು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next