ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ರೇಸ್ ಅಂತ ಕಾಂಪಿಟೇಶನ್ ಇಟ್ಟಿಲ್ಲ. ರೇಸ್ ಪ್ರಶ್ನೆ ಇಲ್ಲ. ಕಾಂಪಿಟೇಶನ್ ಇದ್ದಾಗ ರೇಸ್‌ನಲ್ಲಿ ಇರಬೇಕಾಗುತ್ತದೆ. ರೇಸ್‌ನಲ್ಲಿದ್ದಾರೆಂದು ಭಾವಿಸಬೇಡಿ. ನಾನು ರೇಸ್‌ನಲ್ಲಿ ಇಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಸಹಜ ಚಟುವಟಿಕೆಗಳನ್ನು ಕುತೂಹಲದ ರೀತಿ ತೋರಿಸುತ್ತಿದ್ದೀರಿ. ನನಗೆ ಅದು ಇಷ್ಟವಿಲ್ಲ. ರಾಜ್ಯಾಧ್ಯಕ್ಷ ಹುದ್ದೆ ಅದೊಂದು ಜವಾಬ್ದಾರಿ ಅಷ್ಟೇ. ಅದನ್ನು ಯಾರೂ ಕೇಳಿ ಪಡೆಯಬಾರದು. ಯಾವಾಗ, ಯಾರು ಸೂಕ್ತ ಅನ್ನೋದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ.
ಬಿಜೆಪಿಯಲ್ಲಿ ಯಾವುದೂ ಶಾಶ್ವತವಲ್ಲ. ಯಾವಾಗ ಯಾರು ಸೂಕ್ತ ಅನ್ನೋದನ್ನ ಪಕ್ಷ ನಿರ್ಧರಿಸುತ್ತದೆ. ದೆಹಲಿ ಜವಾಬ್ದಾರಿ ಮುಗಿದಿದೆ. ಸಭೆ ಇದ್ದಾಗಷ್ಟೇ ದೆಹಲಿಯಲ್ಲಿ ಇರುತ್ತಿದ್ದೆ. ಉಳಿದಂತೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ಮುಕ್ತನನ್ನಾಗಿಸಿದೆ. ದೆಹಲಿಯಲ್ಲಿ ಪಕ್ಷದ ಯಾವುದೇ ಕೆಲಸ ಇಲ್ಲ. ನನ್ನ ಕಚೇರಿ ಕ್ಲೋಸ್ ಮಾಡುವುದಷ್ಟೇ ಬಾಕಿ ಇದೆ ಎಂದರು.
ಕಾಂಗ್ರೆಸ್‌ನವರಿಗೆ ಬೆಲೆ ಏರಿಕೆಯ ಬರೆ ಎಳೆಯಿರಿ ಎಂದು ಜನ ಅಧಿಕಾರ ಕೊಟ್ಟಿಲ್ಲ. ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಚುನಾವಣಾ ಸಮಯದಲ್ಲಿ ಅಮಿತ್ ಶಾ ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಪಡೆದು ಕೆಲಸ ಮಾಡಬೇಕು ಎಂದು ಹೇಳಿದ್ದನ್ನು ಅಪಪ್ರಚಾರ ಮಾಡಿದರು.
ತಿರುಪತಿಗೆ 50 ವರ್ಷದಿಂದ ಸರಬರಾಜಾಗುತ್ತಿದ್ದ ನಂದಿನಿ ತುಪ್ಪವನ್ನು ಚುನಾವಣೆ ನಂತರ ನಿಲ್ಲಿಸಿದ್ದು ಕೇಳಿ ದುಃಖವಾಗಿದೆ. ಟಿಟಿಡಿ ನಮ್ಮ ದೊಡ್ಡ ಕಸ್ಟಮರ್ ಆಗಿದ್ದು ಅವರನ್ನು ಕಳೆದುಕೊಳ್ಳಬಾರದು. ನಮ್ಮ ಸಲಹೆ ಸ್ವೀಕಾರ ಮಾಡದಿದ್ದರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತದೆ ಎಂದರು.