ನನಗೆ ಕೋಪ ಬಂದಾಗ ನೀನು ಸಮಾಧಾನ ಮಾಡೋ ರೀತಿಯಿದೆಯಲ್ಲ, ಅದು ನನಗೆ ತುಂಬಾ ಇಷ್ಟ. ಹಾಗಾಗಿ, ನೀನು ಫೋನ್ ಮಾಡುವುದು ಚೂರು ತಡವಾದರೂ ಸಿಟ್ಟು ಮಾಡಿಕೊಳ್ಳುವ ನಾಟಕವಾಡುತ್ತೇನೆ.
ಬಿಟ್ಟೂ ಬಿಡದೆ ಕಾಡುವ ನಿನ್ನ ನೂರೆಂಟು ನೆನಪುಗಳು ಒಮ್ಮೊಮ್ಮೆ ಕೋಗಿಲೆಯ ನಾದವನ್ನು ಹೊಮ್ಮಿಸಿದರೆ, ಮತ್ತೂಮ್ಮೆ ನಿರಾಸೆಯ ಅಲೆಗಳನ್ನು ಮೂಡಿಸುತ್ತವೆ. ನೀನು ಜೊತೆಗಿದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ದಿನವೂ ಪರಿತಪಿಸುವ ಹಾಗಾಗಿದೆ.
ಈ ಪ್ರೀತಿ ಅನ್ನೋದು ಮಾಯೆ ಅಂತ ಹೇಳುವುದು ಸುಳ್ಳಲ್ಲ. ಯಾಕಂದ್ರೆ, ಪ್ರೀತಿಯ ಜಂಜಾಟದಲ್ಲಿ ಸಿಲುಕದೆ, ಒಂಟಿಯಾಗಿ ಇರಬೇಕೆಂಬ ನನ್ನ ತಪಸ್ಸನ್ನು ಹಾಳು ಮಾಡಿದವನು ನೀನು. ಖಾಲಿ ಇದ್ದ ಮನಸ್ಸಿನ ತುಂಬಾ ನಿನ್ನದೇ ಚಿತ್ರ ತುಂಬಿಕೊಳ್ಳುವಂತೆ ಮಾಡಿಬಿಟ್ಟೆ. ಅದೆಷ್ಟು ಬೇಗ ನಿನ್ನನ್ನು ಹಚ್ಚಿಕೊಂಡುಬಿಟ್ಟೆನಲ್ಲ ಅಂತ ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ.
ನೀನು ಸಿಕ್ಕಾಗಿನಿಂದ ನನ್ನ ದಿನಚರಿಗೆ ಹೊಸ ಹೊಸ ವಿಷಯಗಳು ಸೇರಿಕೊಂಡಿವೆ. ನಿನ್ನ ಮಾತುಗಳ ಸುಪ್ರಭಾತದಿಂದಲೇ ನನಗೆ ಬೆಳಗು. ಬೆಳಗ್ಗೆ ಕಣ್ತೆರೆಯುವಾಗ ಮೊಬೈಲ್‌ನಲ್ಲಿ ನಿನ್ನ ಮೆಸೇಜ್ ಇರಲೇಬೇಕು. ಆಮೇಲೆ ನಿನ್ನೊಂದಿಗೆ ಮಾತಾಡುತ್ತಾ ಮುಂಜಾವನ್ನು ಆಹ್ವಾನಿಸುತ್ತೇನೆ. ಆದರೆ, ಇತ್ತೀಚೆಗೆ ನೀನು ಭಾರೀ ಬ್ಯುಸಿ ಆಗಿಬಿಟ್ಟಿದ್ದೀಯ. ಮೊಬೈಲ್ ಹಿಡಿದು ನಿನ್ನ ಕರೆಗಾಗಿ ಕಾಯುವ ಹೊಸ ಕೆಲಸವೊಂದು ದಿನಚರಿಗೆ ಸೇರಿದೆ. ಕೇಳಿದರೆ ಮಾರ್ನಿಂಗ್ ಶಿಫ್ಟ್, ನೈಟ್ ಶಿಫ್ಟ್ ಅಂತೆಲ್ಲಾ ಕಥೆ ಹೇಳ್ತೀಯ. ನಿನಗೇನು ಗೊತ್ತು? ಒಂದು ದಿನ ನೀನು ಮಾತಾಡದಿದ್ದರೂ, ಇಡೀ ದಿನ ಯಾವ ಕೆಲಸದಲ್ಲಿಯೂ ಆಸಕ್ತಿಯೇ ಇರುವುದಿಲ್ಲ.
ನನಗೆ ಕೋಪ ಬಂದಾಗ ನೀನು ಸಮಾಧಾನ ಮಾಡೋ ರೀತಿಯಿದೆಯಲ್ಲ, ಅದು ನನಗೆ ತುಂಬಾ ಇಷ್ಟ. ಹಾಗಾಗಿ, ನೀನು ಫೋನ್ ಮಾಡುವುದು ಚೂರು ತಡವಾದರೂ ಸಿಟ್ಟು ಮಾಡಿಕೊಳ್ಳುವ ನಾಟಕವಾಡುತ್ತೇನೆ. ಮುದುದ್ದು ಮಾತುಗಳಿಂದ ನೀನು ರಮಿಸುವಾಗ ನನಗೆ ಒಳಗೊಳಗೇ ಖುಷಿ. ಆದಷ್ಟು ಬೇಗ ನಿನ್ನ ಕೆಲಸದ ಶಿಫ್ಟ್ ಬದಲಾಯಿಸಿಕೋ. ಯಾಕಂದ್ರೆ ಬೆಳ್ಳಂಬೆಳಗ್ಗೆ ನೀನು ನನಗೆ ಕಾಲ್ ಮಾಡಬೇಕು ಅಷ್ಟೇ!
ನೀನಿಲ್ಲದ ಈ ಹೊತ್ತಲ್ಲಿ, ಹಳೆಯ ದಿನಗಳೆಲ್ಲ ಮತ್ತೆ ಮತ್ತೆ ನೆನಪಾಗುತ್ತಿವೆ. ನಿನ್ನ ನಲ್ಮೆಯ ನುಡಿ, ಒಲುಮೆಯ ಕೋರಿಕೆ, ಹುಸಿಮುನಿಸಿನ ನಾಟಕ, ವಿರಹದ ಮಾತುಗಳೆಲ್ಲವೂ ಮನಸ್ಸನ್ನು ಮುದಗೊಳಿಸುತ್ತವೆ. ಸೂರ್ಯ ಅದೆಷ್ಟೇ ದೂರವಿದ್ದರೂ, ಆತನ ಕಿರಣಗಳು ಭೂಮಿಯನ್ನು ಹಸಿರಾಗಿ ಇಟ್ಟಿರುವಂತೆ, ನಿನ್ನ ನೆನಪು ಸದಾ ನನ್ನಲ್ಲಿ ಚೈತನ್ಯವನ್ನು ತುಂಬುತ್ತದೆ.
ಮನಸಿನ ಮನೆಯಲ್ಲಿ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ದಿನವೂ ಪೂಜಿಸುತ್ತಿದ್ದೇನೆ. ಹುಸಿ ಕೋಪ, ಸಿಹಿ ಮಾತು, ಜಗಳ, ವಿರಹದ ನೋವು, ಕಾಳಜಿ, ಕಾತರ ಇತ್ಯಾದಿಗಳೇ ನಿನಗೆ ಪೂಜೆ- ಅರ್ಚನೆಗಳು. ಕೋಪ ಹೆಚ್ಚಾದಾಗ ಒಮ್ಮೊಮ್ಮೆ ಮಂಗಳಾರತಿ! ಹಾಂ, ದಿನವೂ ಸಲ್ಲಿಸುವ ಪ್ರಾರ್ಥನೆ ಏನು ಗೊತ್ತಾ? ಆದಷ್ಟು ಬೇಗ ಬಂದು ದರ್ಶನ ಕೊಡು.
ಇಂತಿ ನಿನ್ನ ದಾರಿ ಕಾಯುತ್ತಿರುವ
-ನಾಗರತ್ನ ಮತ್ತಿಘಟ್ಟ, ಶಿರಸಿ