Advertisement

Contractors Issue; ಬ್ಲ್ಯಾಕ್ ಮೇಲ್ ಗಳಿಗೆಲ್ಲ ನಾನು ಹೆದರಲ್ಲ…: ಡಿಸಿಎಂ ಡಿ.ಕೆ.ಶಿವಕುಮಾರ್

04:30 PM Aug 08, 2023 | Team Udayavani |

ಬೆಂಗಳೂರು: ಸರಿಯಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಯಾವ ಗುತ್ತಿಗೆದಾರರ ಹಿಂದೆ ಯಾರಿದ್ದಾರೆಂಧೂ ನನಗೆ ಗೊತ್ತಿದೆ. ನಾವು ಕಾನೂನು ಪ್ರಕಾರವಾಗಿ ಕೆಲಸ ಮಾಡುತ್ತಿದ್ದು, ಇಂತಹ ಬ್ಲ್ಯಾಕ್ ಮೇಲ್ ಗಳಿಗೆಲ್ಲ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ.

Advertisement

ಗುತ್ತಿಗೆದಾರರು ತಮ್ಮ ಬಿಲ್ ಪಾವತಿ ಆಗದಿರುವ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.

ಡಿಕೆ ಶಿವಕುಮಾರ್ ಬಿಲ್ ಹಣ ಬಿಡುಗಡೆಗೆ ದುಡ್ಡು ಕೇಳಿದ್ದಾರೆ, ಈ ಬಗ್ಗೆ ಅವರು ನಂಬಿರುವ ಅಜ್ಜನ ಮೇಲೆ ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಯಾವುದೇ ಗುತ್ತಿಗೆದಾರರಿಗೆ ಉತ್ತರ ಕೊಡಲು ಹೋಗುವುದಿಲ್ಲ. ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕೀಯ ಗೊತ್ತಿದೆ. ಗುತ್ತಿಗೆದಾರರು ಗೊತ್ತಿದ್ದಾರೆ. ಅವರ ಹಿಂದೆ ಯಾರಿದ್ದಾರೆ, ಯಾರು ಇದನ್ನು ಹೇಳಿಸುತ್ತಿದ್ದಾರೆ ಎಂದೂ ಗೊತ್ತಿದೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ಕಾನೂನು ಪ್ರಕಾರ ಕೆಲಸ ಮಾಡ್ತಿದ್ದೀವಿ. ಈ ರೀತಿಯ ಬೆದರಿಕೆ, ಬ್ಲಾಕ್‌ಮೇಲ್‌ ಗೆ ನಾನು ಜಗ್ಗುವುದಿಲ್ಲ. ರಾಜ್ಯಪಾಲರಿಗೆ ಪತ್ರ ಕೊಡುವುದು, ರಾಷ್ಟ್ರಪತಿಗೆ ಪತ್ರ ಕೊಡುವುದು, ಪ್ರಧಾನಿಗಳನ್ನು ಭೇಟಿ ಆಗುವುದುದು ಏನು ಬೇಕಾದರೂ ಮಾಡಿಕೊಳ್ಳಲಿ.” ಎಂದರು.

ನಿಮ್ಮ ಮೇಲೆ ಒತ್ತಡ ಹಾಕಲು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, “ನನಗೆ ಯಾವ ಒತ್ತಡ ಇದೆ, ಯಾರು ಒತ್ತಡ ಹಾಕುತ್ತಾರೆ, ಯಾರು ಹೆದರಿಸುತ್ತಾರೆ ನನಗೆ, ನನಗೇ ಹೆದರಿಸಲು ಆಗುತ್ತಾ? ಯಾವುದೇ ಒತ್ತಡ ಬರಲಿ, ಅದನ್ನು ತಡೆದುಕೊಳ್ಳುವ ಶಕ್ತಿ ನನಗಿದೆ. ಈ ಗುತ್ತಿಗೆದಾರರ ವಿಚಾರಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡಲು ಹೋಗಲ್ಲ” ಎಂದು ಹೇಳಿದರು.

ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಯಾವ ಕಾರಣಕ್ಕೆ ಭೇಟಿ ಮಾಡಿದ್ದರು ಎಂಬ ಪ್ರಶ್ನೆಗೆ, “ಮಾಡಲಿ ಬಿಡಿ, ನಾವು ವಿರೋಧ ಪಕ್ಷದಲ್ಲಿ ಇದ್ದಿದ್ದರೆ, ನಮ್ಮನ್ನು ಕೂಡ ಭೇಟಿ ಮಾಡುತ್ತಿರಲಿಲ್ಲವೇ? ಇದನ್ನ ತಪ್ಪು ಎಂದು ಹೇಳಲು ಆಗುತ್ತದೆಯೇ? ಇದು ಅತ್ಯಂತ ಸಾಮಾನ್ಯ ಸಂಗತಿ. ರಾಜಕಾರಣಿಗಳು, ವಿರೋಧ ಪಕ್ಷಗಳು ಇರುವುದೇ ಇಂತಹ ಕೆಲಸ ಮಾಡೋಕೆ, ಮಾಡಲಿ ಬಿಡಿ” ಎಂದು ಉತ್ತರಿಸಿದರು.

Advertisement

ಒಂದಷ್ಟು ಜನ ಗುತ್ತಿಗೆದಾರರು ಗುಂಪು ಕಟ್ಟಿಕೊಂಡು ಸರ್ಕಾರದ ವಿರುದ್ದ ಪದೇ, ಪದೇ ಹೇಳಿಕೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ “ಏನಾದ್ರೂ ಎತ್ತಿಕಟ್ಟಲಿ, ಏನು ಬೇಕಾದರೂ ಮಾಡಲಿ, ನಾನು ಯಾರಿಗೂ ಪ್ರಮಾಣ ಮಾಡಬೇಕಾಗಿಲ್ಲ. ಕಾನೂನು ಏನು ಹೇಳಿದೆಯೋ, ಅದೇ ಉತ್ತರ. ಕೆಲಸ ಮಾಡಿದ್ದರೆ ಬಿಲ್‌ ಕೊಡುತ್ತೇವೆ, ಕೆಲಸ ಮಾಡಲಿಲ್ಲ ಅಂದರೆ ಬಿಲ್‌ ಕೊಡುವುದಿಲ್ಲ. ಇವತ್ತು ಅರ್ಜಿ ಕೊಟ್ಟರು, ನಾಳೆ ಟೆಂಡರ್‌ ಆಯಿತು, ಒಂದು ತಿಂಗಳಲ್ಲಿ 1 ಸಾವಿರ ಕೋಟಿ ರೂ. ಕೆಲಸ ಮಾಡಲು ಆಗುತ್ತಾ ನೀವೇ ಹೇಳಿ. ಅಧಿಕಾರಿಗಳಿಗೆ ಹೇಳಿದ್ದೇವೆ, ಮೌಲ್ಯಮಾಪನ ಮಾಡಿ, ಕೆಲಸ ಆಗಿದ್ದರೆ ಬಿಲ್‌ ಮಾಡಿ ಎಂದು. ಅವರು ಆ ಕೆಲಸ ನೋಡಿಕೊಳ್ಳುತ್ತಾರೆ. ಸರ್ಕಾರ ಇರುವುದು ನೀತಿ ರೂಪಿಸಲು. ಹಾಗಾಗಿ ನಾವು ಬಿಲ್ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದರು.

ಹಿಂದೆ ನೀವು ನಲವತ್ತು ಪರ್ಸೆಂಟ್‌ ಆರೋಪ ಮಾಡಿದ್ದರಲ್ಲ ಅದರ ಬಗ್ಗೆ ಏನು ಹೇಳುವಿರಿ ಎನ್ನುವ ಪ್ರಶ್ನೆಗೆ, “ಹೌದು ನಾವು ಆರೋಪ ಮಾಡಿದ್ದು ಸತ್ಯ, ತನಿಖೆಗೆ ಪತ್ರ ಕೊಟ್ಟಿದ್ದು, ತನಿಖೆ ಮಾಡುತ್ತಿರುವುದು, ಅಶ್ವಥ್‌ ನಾರಾಯಣ್‌ ತನಿಖೆ ಮಾಡಿ ಎಂದು ಹೇಳಿದ್ದು, ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಬೊಮ್ಮಾಯಿ ಅವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದು, ಲೋಕಾಯುಕ್ತ ಅವರು 130 ಕೋಟಿಯನ್ನು ಬಿಲ್‌ ಇಲ್ಲದೆ ಹಣ ಕೊಟ್ಟಿದ್ದಾರೆ ಎಂದು ವರದಿ ನೀಡಿರುವುದು, ಅಧಿಕಾರಿಗಳನ್ನು ಅಮಾನತು ಮಾಡಿರುವುದು ಎಲ್ಲವೂ ಸತ್ಯ, ಸತ್ಯ” ಎಂದು ಹೇಳಿದರು.

ಗುತ್ತಿಗೆದಾರರು ಬಿಜೆಪಿ ಮೇಲೆ ಆರೋಪ ಮಾಡಿದ್ದರು, ಈಗ ನಿಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, “ಗುತ್ತಿಗೆದಾರರು ನನ್ನ ಬಳಿಯೂ ಬಂದಿದ್ದರು, ಕೆಲಸ ಮಾಡಿದ್ದರೆ ನಿಮಗೆ ಹಣ ಸಿಗುತ್ತದೆ ಎಂದು ಅವರಿಗೆ ಹೇಳಿದೆ. ಬಿಲ್‌ ಕೊಡೋದಕ್ಕೂ ಒಂದು ಪ್ರಕ್ರಿಯೆ ಇದೆ. ಎರಡು, ಮೂರು ವರ್ಷ ಕಾದಿಲ್ಲವೇ ಅವರು? ಜಲಸಂಪನ್ಮೂಲ ಇಲಾಖೆಯಲ್ಲಿ ಇರುವುದು 600 ಕೋಟಿ ರೂ. ಆದರೆ 25 ಸಾವಿರ ಕೋಟಿ ಬಿಲ್‌ ಇದೆ. ಎಲ್ಲಿಂದ ಕೊಡುವುದು? ಕೆಲಸ ಮಾಡದವರಿಗೆಲ್ಲ ದುಡ್ದು ಕೊಡಲು ಆಗುತ್ತದೆಯೇ?” ಎಂದು ಮರುಪ್ರಶ್ನಿಸಿದರು.

ಇಂದು ನಡೆದ ಬೆಂಗಳೂರು ಸಚಿವರು, ಶಾಸಕರ ಜತೆಗಿನ ಸಭೆ ಬಗ್ಗೆ ಕೇಳಿದಾಗ, “ಶಾಸಕರ ಕ್ಷೇತ್ರಗಳ ಸಮಸ್ಯೆಗಳು, ಕಳೆದ ಸರ್ಕಾರ ಮಾಡಿದ್ದ ತಾರತಮ್ಯಗಳ ಬಗ್ಗೆ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ಯಾವ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next