ಹೊಸದಿಲ್ಲಿ : ‘ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ; ಅಂತೆಯೇ ನಾನೀಗ ಪಕ್ಷದ ಅಧ್ಯಕ್ಷನಲ್ಲ; ಆದುದರಿಂದ ಪಕ್ಷ ಬೇಗನೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು’ ಎಂದು ರಾಹುಲ್ ಗಾಂಧಿ ತಮ್ಮ ಪಕ್ಷಕ್ಕೆ ಖಡಾಖಂಡಿತವಾಗಿ ಹೇಳಿದ್ದಾರೆ.
‘ಕಾಂಗ್ರೆಸ್ ಪಕ್ಷ ಆದಷ್ಟು ಬೇಗನೆ ಹೊಸ ಅಧ್ಯಕ್ಷರನ್ನು ಚುನಾಯಿಸಬೇಕು; ನಾನಂತೂ ಆ ಪ್ರಕ್ರಿಯೆಯಲ್ಲಿ ಇಲ್ಲವೇ ಇಲ್ಲ; ಪಕ್ಷ ಇನ್ನಷ್ಟು ವಿಳಂಬಿಸದೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು’ ಎಂದು ರಾಹುಲ್ ಗಾಂಧಿ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
‘ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯುಸಿ) ನೂತನ ಪಕ್ಷಾಧ್ಯಕ್ಷರ ನೇಮಕಾತಿಗಾಗಿ ಬೇಗನೆ ಸಭೆ ಸೇರಿ ಚುನಾಯಿಸಬೇಕು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸೋಲನ್ನು ಕಂಡಿರುವ ಕಾರಣ ರಾಹುಲ್ ಅವರು ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.
ರಾಜೀನಾಮೆಯನ್ನು ಹಿಂಪಡೆಯುವಂತೆ ಪಕ್ಷದ ಹಿರಿಯ ನಾಯಕರೆಲ್ಲ ಮಾಡಿದ್ದ ಯಾವುದೇ ಪ್ರಯತ್ನಗಳು ಈ ತನಕ ಫಲಿಸಿಲ್ಲ. ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ತನ್ನ ನಿರ್ಧಾರ ಅಚಲವಾದದ್ದು ಎಂದು ರಾಹುಲ್ ಗಾಂಧಿ ಈ ಮೊದಲೇ ಸ್ಪಷ್ಟಪಡಿಸಿದ್ದರು.