ಮುಂಬಯಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವ ದೇಶ ಇದೀಗ 21 ದಿನಗಳ ಲಾಕ್ ಡೌನ್ ಸ್ಥಿತಿಯಲ್ಲಿದೆ. ಇನ್ನೊಂದೆಡೆ ಸಾವಿರಾರು ಜನ ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹಲವರು ಈ ಸಂಕಷ್ಟದ ಸಮಯದಲ್ಲಿ ನಮ್ಮ ಉಳಿವಿಗಾಗಿ ತಾವು ಕಾರ್ಯನಿರ್ವಹಿಸುತ್ತಿದ್ದಾರೆ.
ಇಂತಹ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿಕೊಳ್ಳಲು ಮತ್ತು ಈ ವೈರಸ್ ವಿರುದ್ಧ ಹೋರಾಟದಲ್ಲಿ ಸಾಥ್ ನೀಡುವ ಉದ್ದೇಶದಿಂದ ಮನೆಯಲ್ಲೇ ಇರುವ ದೇಶವಾಸಿಗಳಲ್ಲಿ ಮನೋಸ್ಥೈರ್ಯವನ್ನು ತುಂಬುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಕನಿಷ್ಟ 9 ನಿಮಿಷಗಳ ಕಾಲ ನಮ್ಮ ಮನೆಗಳಲ್ಲಿರುವ ವಿದ್ಯುತ್ ದೀಪಗಳನ್ನು ಆರಿಸಿ, ಹಣತೆ, ಟಾರ್ಚ್ ಬೆಳಕು, ಕ್ಯಾಂಡಲ್ ಬೆಳಕು ಅಥವಾ ಮೊಬೈಲ್ ದಿಪದ ಬೆಳಕನ್ನು ಉರಿಸುವಂತೆ ವಿನಂತಿಸಿಕೊಂಡಿದ್ದಾರೆ. ಪ್ರಧಾನಿಯವರ ಈ ಕರೆಗೆ ದೇಶವಾಸಿಗಳ ಸಹಿತ ಹಲವು ಸೆಲೆಬ್ರಿಟಿಗಳೂ ಸಹ ಬೆಂಬಲ ಸೂಚಿಸಿದ್ದಾರೆ.
ಹೀಗೆ ಪ್ರಧಾನಿಯವರ ಈ ‘ದೀಪ ಅಭಿಯಾನಕ್ಕೆ’ ಬೆಂಬಲ ಸೂಚಿಸಿದವರಲ್ಲಿ ಖ್ಯಾತ ಕ್ರಿಕೆಟ್ ಪಟು ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಸಹ ಒಬ್ಬರು. ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ನೈರ್ಮಲ್ಯ ಕಾರ್ಮಿಕರ ಸೇವೆಯನ್ನು ಗೌರವಿಸಿ ತಾನು ಈ ಸಂದರ್ಭದಲ್ಲಿ ದೀಪ ಹಚ್ಚುತ್ತೇನೆ ಎಂದು ಸಚಿನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
‘ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಿ ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಲು ಶ್ರಮಿಸುತ್ತಿರುವ ಲಕ್ಷಾಂತರ ನೈರ್ಮಲ್ಯ ಕಾರ್ಮಿಕರ ಶ್ರಮಕ್ಕೆ ನಮನ ಸಲ್ಲಿಸಲು ನಾನೊಂದು ಹಣತೆಯನ್ನು ಹಚ್ಚುತ್ತೇನೆ. ನೀವು ಒಂದು ಕಾರಣವನ್ನು ಹುಡುಕಿಕೊಳ್ಳಿ ಆದರೆ ನಾವೆಲ್ಲರೂ ಒಗ್ಗಟ್ಟಾಗೋಣ’ ಎಂದು ಸಚಿನ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Related Articles
ಇದಕ್ಕೂ ಮೊದಲು ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಹಾರ್ಧಿಕ್ ಪಾಂಡ್ಯ ಅವರು ಪ್ರಧಾನಿಯವರ ಈ ‘ದೀಪ ಬೆಳಗಿಸೋಣ’ ಅಭಿಯಾನವನ್ನು ಬೆಂಬಲಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು.