Advertisement

ಆಸೀಸ್‌ ಸರಣಿಗೆ ಪೂರ್ತಿ ಫಿಟ್‌: ರೋಹಿತ್‌ ಶರ್ಮಾ ವಿಶ್ವಾಸ

09:12 AM Nov 23, 2020 | keerthan |

ಬೆಂಗಳೂರು: ಗಾಯದ ಸಮಸ್ಯೆಗೆ ಸಿಲುಕಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್‌ ಟ್ರೈನಿಂಗ್‌ ನಡೆಸುತ್ತಿರುವ ರೋಹಿತ್‌ ಶರ್ಮ ಚೇತರಿಕೆಯ ಹಾದಿಯಲ್ಲಿದ್ದಾರೆ. “ನಾನು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು, ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಪೂರ್ತಿ ಫಿಟ್‌ನೆಸ್‌ನೊಂದಿಗೆ ಸಜ್ಜಾಗಲಿದ್ದೇನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಐಪಿಎಲ್‌ ವೇಳೆ ಗಾಯಾಳಾಗಿ ಆಸ್ಟ್ರೇಲಿಯ ಪ್ರವಾಸದ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯಿಂದ ಬೇರ್ಪಟ್ಟ ರೋಹಿತ್‌ ಶರ್ಮ ಟೆಸ್ಟ್‌ ಸರಣಿಗೆ ಆಯ್ಕೆಯಾಗಿದ್ದಾರೆ.

“ಪಾರ್ಶ್ವ ಸ್ನಾಯು ಸೆಳೆತದಿಂದ ಗುಣಮುಖನಾಗಿದ್ದೇನೆ. ಫಿಟ್‌ನೆಸ್‌ ಕಾಯ್ದುಕೊಂಡು ಇನ್ನಷ್ಟು ಬಲಿಷ್ಠಗೊಳ್ಳುವ ಪ್ರಯತ್ನ ನಡೆಸುತ್ತಿದ್ದೇನೆ. ಸುದೀರ್ಘ‌ ಮಾದರಿಯ ಕ್ರಿಕೆಟ್‌ ಆರಂಭಿಸುವುದಕ್ಕೂ ಮೊದಲು ಮಾನಸಿಕವಾಗಿ ಗಟ್ಟಿಯಾಗಬೇಕು. ಇದೇ ಕಾರಣಕ್ಕೆ ನಾನು ಎನ್‌ಸಿಎಯಲ್ಲಿದ್ದೇನೆ’ ಎಂದು ರೋಹಿತ್‌ ಹೇಳಿದರು.

ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ದ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ತನ್ನ ಬ್ಯಾಟಿಂಗ್‌ ಕ್ರಮಾಂಕದ ಕುರಿತಂತೆ ಮ್ಯಾನೇಜ್‌ಮೆಂಟ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಮತ್ತು ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್‌ ಮಾಡಲು ಸಿದ್ಧನಾಗಿದ್ದೇನೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರೋಹಿತ್‌ ಶರ್ಮ ಹೇಳಿದ್ದಾರೆ.

Advertisement

ಆಸ್ಟ್ರೇಲಿಯಾದಲ್ಲಿ ಈಗಾಗಲೇ ಕಾಲಿಟ್ಟಿರುವ ಟೀಮ್‌ ಇಂಡಿಯಾ ವಿರಾಟ್‌ ಅನುಪಸ್ಥಿತಿಯಲ್ಲಿ ಏನು ಮಾಡಬೇಕೆಂಬ ರಣತಂತ್ರ ರೂಪಿಸಿರುತ್ತದೆ ಎಂದು ನಾನು ನಂಬಿದ್ದೇನೆ. ಯಾರು ಓಪನಿಂಗ್‌ ಮಾಡಬೇಕು, ವಿರಾಟ್‌ ಜಾಗದಲ್ಲಿ ಯಾರು ಆಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಿರುತ್ತಾರೆ. ಅಲ್ಲಿಗೆ ಹೋದ ಬಳಿಕವಷ್ಟೇ ನನಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಆದರೆ ಯಾವುದೇ ಕ್ರಮಾಂಕದಲ್ಲಿ ಆಡಲು ನಾನು ಸಿದ್ಧ ಎಂದು ರೋಹಿತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next