ಮೈಸೂರು: ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ತಾವು ಕೂಡ ಗುಂಡ್ಲುಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ)ದ ನೂತನ ಅಧ್ಯಕ್ಷ ಎಚ್.ಎಸ್. ನಂಜಪ್ಪ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದಶಕಗಳಿಂದ ತಾವು ಗ್ರಾಪಂ ಅಧ್ಯಕ್ಷ, ತಾಪಂ ಅಧ್ಯಕ್ಷ, ಜಿಪಂ ಸದಸ್ಯನಾಗಿ ತಳಮಟ್ಟದಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ಈ ಹಿಂದೆ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಎಚ್.ಎಸ್.ಮಹದೇವ ಪ್ರಸಾದ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದೆ ಎಂದರು.
ಆದರೆ, ಮಹದೇವಪ್ರಸಾದ್ ಅವರು ಅಕಾಲಿಕ ಮರಣವನ್ನಪ್ಪಿರುವುದರಿಂದ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಅವರ ಬಗ್ಗೆ ಅನುಕಂಪವಿದೆ ಎಂಬುದರ ಜತೆಗೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮಹದೇವ ಪ್ರಸಾದ್ ಅವರು ಕಂಡಿದ್ದ ಕನಸುಗಳನ್ನು ಗೀತಾ ಅವರು ಸಾಕಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ಈ ಕಾರಣಕ್ಕಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಉಪ ಚುನಾವಣೆಯಲ್ಲಿ ಗೀತಾ ಮಹದೇವ ಪ್ರಸಾದ್ ಅವರನ್ನು ಬೆಂಬಲಿಸಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಕೂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. 2018ರ ಚುನಾವಣೆಯಲ್ಲಿ ಟಿಕೆಟ್ ಕೇಳದಿರಲಿ ಎಂಬ ಕಾರಣಕ್ಕೆ ಶಿವಲಿಂಗಯ್ಯ ಅವರನ್ನು ಮಧ್ಯಂತರದಲ್ಲಿ ವಜಾಗೊಳಿಸಿ ತಮಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಬಗ್ಗೆ ತಮಗೇನು ಮಾಹಿತಿ ಇಲ್ಲ ಎಂದರು.
ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಂಸದ ಧ್ರುವನಾರಾಯಣ ತಮ್ಮ ಮೇಲೆ ವಿಶ್ವಾಸವಿಟ್ಟು ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ, ಅಭಿವೃದ್ಧಿ ಪರ ಕಾಳಜಿಯಿಂದ ಕೆಲಸ ಮಾಡುವುದಾಗಿ ತಿಳಿಸಿದರು.