ಪಾಂಡವಪುರ: ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ, ಹಾಗಾಗಿ ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು. ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಕೆ.ಎಸ್.ಪುಟ್ಟಣ್ಣಯ್ಯನವರ ಮನೆಗೆ ಭೇಟಿ ನೀಡಿ ಸುನೀತಾಪುಟ್ಟಣ್ಣಯ್ಯ ಹಾಗೂ ದರ್ಶನ್‌ಪುಟ್ಟಣ್ಣಯ್ಯರೊಂದಿಗೆ ಚೆರ್ಚಿಸಿ ನಂತರ ಮಾತನಾಡಿ, ನಮಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ.
ಆದರೆ, ಮಂಡ್ಯ ಜಿಲ್ಲೆಯ ಜನರು, ಅಂಬರೀಶ್ ಅಭಿಮಾನಿಗಳು ನೀವು ರಾಜಕೀಯಕ್ಕೆ ಬರಬೇಕು. ಲೋಕಸಭಾ ಚುನಾವಣೆಯಲ್ಲಿ ಸ್ವರ್ಧೆಮಾಡಬೇಕು ಎಂದು ಒತ್ತಡ ತಂದ ಹಿನ್ನೆಲೆಯಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದರು.
ಅಂಬರೀಶ್ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ರಾಜಕೀಯ ಮಾಡಿದ್ದಾರೆ. ಹಾಗಾಗಿ ನಾವು ಸಹ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡೋದಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಸಿದ್ದರಾಮಯ್ಯರನ್ನು ಭೇಟಿ ನೀಡಿ ಚರ್ಚೆ ನಡೆಸಿದ್ದೇನೆ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನೊಂದಿಗೆ ಚೆರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಅವರು ಸಹ ಕಡಾಖಂಡಿತವಾಗಿ ಟಿಕೆಟ್ ಕೋಡೋದಿಲ್ಲ ಎಂದು ಹೇಳಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ತೀರ್ಮಾನಕ್ಕಾಗಿ ನಾನು ಕಾಯುತ್ತೇನೆ. ಪಕ್ಷ ನನಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಅಂತಿಮ ತೀರ್ಮಾನವನ್ನು ಜನರಿಗೆ ಬಿಡುತ್ತೇನೆ. ಜಿಲ್ಲೆಯ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ನನ್ನ ಅಂತಿಮ ತೀರ್ಮಾನ ಜನತೆ ಪಕ್ಷೇತರವಾಗಿ ಸ್ಪರ್ಧಿಸಿ ಎಂದರೆ ಪಕ್ಷೇತರವಾಗಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎನ್ನುವುದನ್ನು ಸ್ಪಷ್ಟಪಡಿಸಿದರು.
ಜಿಲ್ಲೆಯ ಜನತೆ ಅಂಬರೀಶ್ ಅವರನ್ನು ಮೂರು ಬಾರಿ ಸಂಸದರಾಗಿ, ಒಮ್ಮೆ ಹೆಚ್ಚು ಮತಗಳ ಅಂತರದೊಂದಿಗೆ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲೆಯ ಜನರ ಋಣ ಸಾಕಷ್ಟು ನಮ್ಮ ಕುಟುಂಜದ ಮೇಲಿದೆ, ನಾನು ಆ ಋಣ ತೀರಿಸಬೇಕಿದೆ ಹಾಗಾಗಿ ನಾನು ಸ್ಪರ್ಧೆ ಮಾಡುವುದಾದರೆ ಅದು ಮಂಡ್ಯದಿಂದಲೇ ಎಂದು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಫೆ.26ರಂದು ರೈತಸಂಘ ಮುಖಂಡರ ಸಭೆ ಇದೆ. ಸಭೆಯಲ್ಲಿ ಚೆರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬೇರೆ ಪಕ್ಷದವರು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೋ ನೋಡೋಣ ಆ ನಂತರ ನಾವು ಬೆಂಬಲ ಕೊಡೋದೋ ಬೇಡವೋ ತೀರ್ಮಾನಿಸುತ್ತೇವೆ ಎಂದರು.
ಇದಕ್ಕೂ ಮುನ್ನ ಸುಮಲತಾ ಹಾಗೂ ಪುತ್ರ ಅಭಿಷೇಕ್ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ತೆರಳಿ ಪುಷ್ಪಾರ್ಚನೆ ಸಲ್ಲಿಸಿದರು. ಕೆಪಿಸಿಸಿ ಸದಸ್ಯರಾದ ಎಲ್.ಡಿ.ರವಿ ಸಚ್ಚಿದಾನಂದ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಜಿ.ಕೆ.ಕೋಮಲಚನ್ನಪ್ಪ,
ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಕಾಂಗ್ರೆಸ್ ಅಹಿಂದ ಘಟಕದ ಅಧ್ಯಕ್ಷ ಶ್ರೀನಿವಾಸ್, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಅಂಬರೀಶ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಮುಖಂಡರಾದ ದೇವೇಗೌಡ, ಹಾರೋಹಳ್ಳಿ ನಂಜುಂಡೇಗೌಡ, ಕೆ.ಕುಬೇರ, ಬಿ.ಕೆ.ರೇವಣ್ಣ, ಬಿ.ಜೆ.ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.