ಹರಪನಹಳ್ಳಿ: ನಾನು ಕೂಡ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ದೇಶಕ ಆರುಂಡಿ ನಾಗರಾಜ್ ತಿಳಿಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಇರುವ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾ ತಾಲೂಕಿನ ಎಲ್ಲಾ ಸಮುದಾಯದ ಜನರ ಪ್ರೀತಿ ವಿಶ್ವಾಸದೊಂದಿಗೆ ತಾಲೂಕು ಬಿಜೆಪಿ ಅಧ್ಯಕ್ಷನಾಗಿ, ಪಕ್ಷದ ಕಾರ್ಯಕಾರಣಿ ಮಂಡಳಿಯ ರಾಜ್ಯ ಸದಸ್ಯನಾಗಿ ವಿವಿಧ ತಾಲೂಕುಗಳ ಉಸ್ತುವಾರಿಯಾಗಿ, ಬಳ್ಳಾರಿ ಜಿಲ್ಲಾ ಸಹ ಪ್ರಭಾರಿಯಾಗಿ ಸೇವೆ ಸಲ್ಲಿಸಿದ್ದೇನೆ.
ನನ್ನ ತಂದೆ ಗುರುಲಿಂಗಪ್ಪನವರು ಸಹ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ, ಹಲುವಾಗಲು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ, ಮಂಡಲ ಪಂಚಾಯ್ತಿ ಸದಸ್ಯರಾಗಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ.
ಅಲ್ಲದೇ ನನ್ನ ಶ್ರೀಮತಿ ಡಾ|| ಆರುಂಡಿ ಸುವರ್ಣ ಕೂಡ ಪಿಹೆಚ್.ಡಿ ಪದವಿಧರೆಯಾಗಿದ್ದು, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಹಲುವಾಗಲು ಜಿಲ್ಲಾ ಮಂಚಾಯತಿ ಕ್ಷೇತ್ರದ ಸದಸ್ಯೆಯಾಗಿ ಉತ್ತಮ ಕೆಲಸ ಮಾಡುವ ಮೂಲಕ ಮತದಾರರ ಪ್ರೀತಿಯನ್ನು ಗಳಿಸಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಸ್ಥಳೀಯರು ಪಕ್ಷದ ಅಭ್ಯರ್ಥಿಯಾಗಬೇಕೆಂಬ ಎಂಬ ಕೂಗು ಕೇಳಿಬರುತ್ತಿತ್ತು, ಇದೀಗ ಕಾಲ ಕೂಡಿಬಂದಿದೆ ಹೈಕಮಾಂಡ್ ನನನ್ನು ಗುರುತಿಸಿ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದರೆ ನಾನು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಆರುಂಡಿ ನಾಗರಾಜ್ ಹೇಳಿದರು.
ಕರುಣಾಕರ ರೆಡ್ಡಿ ಅವರು ಹರಪನಹಳ್ಳಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ.