Advertisement

ನಾನು ಕಲಾವತಿಯಲ್ಲ, ನಾನೊಬ್ಬ ಪುರುಷ!

12:45 AM Jan 20, 2019 | Team Udayavani |

ತಿರುವನಂತಪುರ: “ನಾನೊಬ್ಬ ಪುರುಷ. ನನಗೆ 52 ವರ್ಷ ವಯಸ್ಸು. ನನ್ನ ಹೆಸರು ಕಲಾವತಿಯಲ್ಲ!’

Advertisement

ಇದು ಪುದುಚೇರಿಯ ಟ್ಯಾಕ್ಸಿ ಡ್ರೈವರ್‌ ಶಂಕರ್‌ ಹೇಳುವ ಮಾತು. ಶಬರಿಮಲೆ ದೇಗುಲಕ್ಕೆ ಈವರೆಗೆ 51 ಮಂದಿ ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಆಗಿರುವ ಎಡವಟ್ಟುಗಳು ಒಂದೊಂದಾಗಿ ಬಹಿರಂಗವಾಗತೊಡಗಿವೆ. ಆ ಪಟ್ಟಿಯಲ್ಲಿ ಕಲಾವತಿ ಎಂಬ ಮಹಿಳೆಯ ಹೆಸರೂ ಇದ್ದು, ಅದರ ಜೊತೆಗೆ ಒಂದು ದೂರವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿದರೆ, ಕರೆ ಸ್ವೀಕರಿ ಸುವ ಶಂಕರ್‌, ನಾನು ದೇಗುಲಕ್ಕೆ ಹೋಗಿದ್ದು ನಿಜ. ಆದರೆ ನಾನು ಪುರುಷ, ನನ್ನ ಹೆಸರು ಕಲಾವತಿಯಲ್ಲ ಎನ್ನುತ್ತಿದ್ದಾರೆ. ಇದೇ ರೀತಿ, ಚೆನ್ನೈ ಮೂಲದ 47 ವರ್ಷದ ಪರಮಜ್ಯೋತಿ ಎಂಬವರು ಕೂಡ ನಾನು ಮಹಿಳೆಯಲ್ಲ ಎಂದು ಹೇಳಿಕೊಂಡಿದ್ದಾರೆ. ಚೆನ್ನೈನ ಗೃಹಿಣಿ ಶಿಲ್ಪಾ ಅವರ ಹೆಸರೂ ಪಟ್ಟಿಯಲ್ಲಿದ್ದು, ಅವರನ್ನು ಸಂಪರ್ಕಿಸಿದರೆ, ನನಗೆ 52 ವರ್ಷ ತುಂಬಿದ್ದು, ಟೈಪಿಂಗ್‌ನಲ್ಲಾದ ಲೋಪದಿಂದ ವಯಸ್ಸಿನಲ್ಲಿ ವ್ಯತ್ಯಾಸವಾಗಿದೆ ಎಂದಿದ್ದಾರೆ. ಇದೇ ರೀತಿ ಹಲವರು ತಮ್ಮ ವಯಸ್ಸು 51 ದಾಟಿದೆ ಎಂದೇ ಹೇಳುತ್ತಿದ್ದಾರೆ. ಆದರೆ, ಕೇರಳ ಸರಕಾರ ಮಾತ್ರ, ಎಲ್ಲರೂ ಭೀತಿಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದಿದೆ. 

ಸರಕಾರದ ವಿರುದ್ಧ ಕಾಂಗ್ರೆಸ್‌, ಬಿಜೆಪಿ ವಾಗ್ಧಾಳಿ ನಡೆಸಿದ್ದು, ಸುಳ್ಳು ಅಫಿದಾವಿತ್‌ ಸಲ್ಲಿಸುವ ಮೂಲಕ ಸುಪ್ರೀಂ ಕೋರ್ಟ್‌ನ ಹಾದಿ ತಪ್ಪಿಸಲಾಗಿದೆ ಎಂದು ಆರೋಪಿಸಿವೆ. 

ತಿರುವಾಂಕೂರು ದೇವಸ್ವಂ ಮಂಡಳಿಯು ಈ ವಿವಾದದಿಂದ ಅಂತರ ಕಾಯ್ದುಕೊಂಡಿದ್ದು, ನಮ್ಮಲ್ಲಿ ಯಾವ ಪ್ರಶ್ನೆಯನ್ನೂ ಕೇಳಬೇಡಿ. ಯಾರು ಪಟ್ಟಿ ಸಲ್ಲಿಸಿದರೋ ಅವರನ್ನೇ ಕೇಳಿ ಎಂದಿದೆ.

ಇಬ್ಬರು ಮಹಿಳೆಯರು ವಾಪಸ್‌: ಈ ನಡುವೆ, ಶನಿವಾರ ಮುಂಜಾನೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಇಬ್ಬರು ಮಹಿಳೆಯರು ವಿಫ‌ಲ ಯತ್ನ ನಡೆಸಿದ್ದಾರೆ. ಭಕ್ತರ ವಿರೋಧದಿಂದಾಗಿ ನಿಮಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ ಬಳಿಕ, ಕಣ್ಣೂರಿನವರಾದ ರೇಷ್ಮಾ ನಿಶಾಂತ್‌ ಮತ್ತು ಶನೀಲಾ ಸಜೇಶ್‌ ವಾಪಸಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next