Advertisement

ಬಿಜೆಪಿಯಿಂದ ನನಗೂ ಆಫ‌ರ್‌ ಬಂದಿತ್ತು

12:12 AM Jul 20, 2019 | Team Udayavani |

ವಿಧಾನಸಭೆ: ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ “ರಹಸ್ಯ ಒಪ್ಪಂದ’ಗಳ ಬಗೆಗಿನ ವಿವರವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸದನದಲ್ಲಿ ಬಿಚ್ಚಿಟ್ಟರು. 2013ರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರವೂ ಬಿಜೆಪಿಯಿಂದ ತಮಗೆ ಆಫ‌ರ್‌ ಬಂದಿತ್ತು ಎಂಬುದನ್ನು ಬಹಿರಂಗಗೊಳಿಸಿದರು.

Advertisement

“ಹತ್ತು-ಹನ್ನೆರಡು ವರ್ಷಗಳ ರಾಜ್ಯ ರಾಜಕೀಯದಲ್ಲಿ ನಡೆದ ಹಲವಾರು ಘಟನೆಗಳಿಗೆ ನಾನೂ ಸಾಕ್ಷಿಯಾಗಿದ್ದೇನೆ. ಕೆಲವು ಘಟನೆಗಳಿಗೆ ನನ್ನದೂ ಪಾತ್ರ ಇದೆ. ಅದರಲ್ಲಿ ನನ್ನ ನಿರ್ಧಾರ ತಪ್ಪು ಇರಬಹುದು, ಒಳ್ಳೆಯದೂ ಆಗಿರಬಹುದು. ಎಲ್ಲವನ್ನೂ ಸದನದ ಮೂಲಕ ಜನರಿಗೆ ತಿಳಿಸಬೇಕಾಗಿದೆ’ ಎಂದು ಹೇಳಿದರು.

ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾವು ಏನೇ ಮಾಡಿದರೂ ಹೇಗೇ ನಡೆದುಕೊಂಡರೂ ಅಂತಿಮವಾಗಿ ಒಬ್ಬನಿಗೆ ಉತ್ತರ ಹೇಳಲೇಬೇಕು. ನ್ಯಾಯ ನಿರ್ಣಯದ ಆ ದಿನ ಬಂದೇ ಬರುತ್ತದೆ. ಅಂದು ನಮ್ಮ ನಡವಳಿಕೆ, ಕಾಯಕಗಳಿಗೆ ನಾವೇ ಉತ್ತರಿಸಬೇಕು. ಆ ಮಹತ್ವದ ದಿನ ನಮ್ಮ ಪರವಾಗಿ ವಾದಿಸಲು ನ್ಯಾಯವಾದಿಗಳೂ ಇರುವುದಿಲ್ಲ.

ಬಂಧುಗಳು, ಅಭಿಮಾನಿಗಳು ಇರುವುದಿಲ್ಲ’ ಎಂದು “ಜಡ್ಜ್ಮೆಂಟ್‌ ಡೇ’ ಪುಸ್ತಕದಲ್ಲಿ ಬೈಬಲ್‌ನಲ್ಲಿನ ಅಂಶ ಉಲ್ಲೇಖೀಸಿರುವುದನ್ನು ಪ್ರಸ್ತಾಪಿಸಿದರು. “ನಾನು ಈ ಸದನಕ್ಕೆ ಬಂದಿದ್ದೇ 2004ರಲ್ಲಿ. ಕೊನೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶ ಬಂದಾಗ ಕಾಂಗ್ರೆಸ್‌-ಜೆಡಿಎಸ್‌ ಸೇರಿ ಸರ್ಕಾರ ರಚನೆ ಮಾಡಿತ್ತು.

ನಂತರ ಸಿದ್ದರಾಮಯ್ಯ ಹಾಗೂ ದೇವೇಗೌಡರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಸಮಸ್ಯೆ ಉದ್ಭವಿಸಿ ಸಿದ್ದರಾಮಯ್ಯ ಅವರು ನಮ್ಮನ್ನು ಬಿಟ್ಟು ಹೋದರು. ಆಗ, ದೇವೇಗೌಡರು ಹೊಸದಾಗಿ ಚುನಾವಣೆಗೆ ಹೋಗಲು ಬಯಸಿದ್ದರು. ಆದರೆ, ಆಗ ಪ್ರತಿಪಕ್ಷ ನಾಯಕರಾಗಿದ್ದ ಇದೇ ಯಡಿಯೂರಪ್ಪ ಅವರು ತಮ್ಮ ಸಹಾಯಕನ ಮೂಲಕ ನನಗೆ ಚೀಟಿ ಕಳುಹಿಸಿದರು.

Advertisement

ನಮ್ಮ ಶಾಸಕರು ಸಹ ಸಾಲ ಮಾಡಿ ಚುನಾವಣೆ ಗೆದ್ದು ಬಂದಿದ್ದೇವೆ. ಮತ್ತೆ ಚುನಾವಣೆ ಕಷ್ಟ ಎಂದು ಹೇಳಿದರು. ಆಗ, ಪಕ್ಷ ಹಾಗೂ ನಮ್ಮ ಶಾಸಕರನ್ನು ಉಳಿಸಲು ಬಿಜೆಪಿ ಜತೆ ಸರ್ಕಾರ ರಚನೆಗೆ ಮುಂದಾದೆ. ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ಜಗದೀಶ್‌ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ ಅವರು ಹಂತ ಹಂತಗಳಲ್ಲಿ ಮಾತನಾಡಿದರು. ಕೇಂದ್ರದ ಬಿಜೆಪಿ ನಾಯಕರು ಚರ್ಚೆ ಮಾಡಿದರು.

ಸರ್ಕಾರ ರಚನೆಯಾಯಿತು. ನಂತರ ಅಧಿಕಾರ ಹಸ್ತಾಂತರ ಮಾಡಲು ನಾನು ಮುಂದಾಗಿದ್ದೆ. ಬಿಜೆಪಿ ನಾಯಕರೇ ಆಸ್ಪದ ನೀಡಲಿಲ್ಲ. ಆದಾದ ನಂತರ ನನಗೆ ವಚನಭ್ರಷ್ಟ ಪಟ್ಟ ಕಟ್ಟಿ ಚುನಾವಣೆ ನಡೆದು, ಬಿಜೆಪಿ 110 ಸೀಟು ಪಡೆದು ಗೆಲುವು ಸಾಧಿಸಿತು ಎಂದರು.

ಯಡಿಯೂರಪ್ಪ ಅವರು ಐವರು ಪಕ್ಷೇತರ ಶಾಸಕರ ಬೆಂಬಲದಿಂದ ಮುಖ್ಯಮಂತ್ರಿಯೂ ಆದರು. ಅದಾದ ಒಂದೇ ತಿಂಗಳಲ್ಲಿ ವೆಂಕಟರಮಣಪ್ಪ ಸೇರಿ ಐವರು ಪಕ್ಷೇತರರು ನನ್ನ ಬಳಿ ಬಂದು ನಾವೆಲ್ಲಾ ವಾಪಸ್‌ ಆಗಲು ತೀರ್ಮಾನ ಮಾಡಿದ್ದೇವೆ. ನೀವು ಮನಸ್ಸು ಮಾಡಿ ಎಂದರು. ಆಗ, ನಾನು ನಾವು ಇರುವುದು 38 ಶಾಸಕರು, ಕಾಂಗ್ರೆಸ್‌ನವರು ಮನಸ್ಸು ಮಾಡಬೇಕು.

ಸರ್ಕಾರ ಈಗಷ್ಟೇ ರಚನೆಯಾಗಿದೆ. ಅಂತಹ ಸಾಹಸ ಬೇಡ ಎಂದು ಸುಮ್ಮನಾಗಿಸಿದೆ. ಅದಾದ ನಂತರ ಬಿಜೆಪಿಯವರೇ ಬಹುಮತ ಇದ್ದರೂ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ “ಆಪರೇಷನ್‌ ಕಮಲ’ ಎಂಬ ಪ್ರಜಾಪ್ರಭುತ್ವದ ಅಣಕ ಪ್ರಾರಂಭಿಸಿ, 18 ಶಾಸಕರ ಕೈಲಿ ರಾಜೀನಾಮೆ ಕೊಡಿಸಿದರು.

ಆದರೂ ಸರ್ಕಾರ ಭದ್ರಗೊಳ್ಳಲಿಲ್ಲ. ಸಚಿವರು ಸೇರಿ 22 ಜನ ಮತ್ತೆ ಬಂಡೆದ್ದರು. ಇವತ್ತು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಲೀಡ್‌ ತೆಗೆದುಕೊಂಡಿರುವ ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ ನನ್ನನ್ನು ದುರುಪಯೋಗಪಡಿಸಿಕೊಂಡು ಹೇಗೆ ಸಚಿವರಾದರು ಗೊತ್ತಿಲ್ಲವೇ?’ ಎಂದು ಕುಟುಕಿದರು.

ರೇಣುಕಾಚಾರ್ಯಗೆ ಫ‌ುಲ್‌ ಮೀಲ್ಸ್‌: ಅತೃಪ್ತರನ್ನು ಕರೆದೊಯ್ದು ಮತ್ತೆ ಯೂಟರ್ನ್ ತೆಗೆದುಕೊಂಡಿದ್ದಕ್ಕೆ ರೇಣುಕಾಚಾರ್ಯಗೆ ಫ‌ುಲ್‌ ಮೀಲ್ಸ್‌ ಎಂದು ಆಗ ಪತ್ರಿಕೆಗಳಲ್ಲಿ ಸುದ್ದಿ ಬಂತು. ಹೋಟೆಲ್‌ನಿಂದ ಹೊರಗೆ ಬಂದಾಗ ಅವರ ಮುಖ ಊದಿಕೊಂಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ನಂತರವೂ ಎಷ್ಟೆಲ್ಲಾ ಬೆಳವಣಿಗೆ ಆಯಿತು.

ಬಿಜೆಪಿಯಲ್ಲಿ ಮೂವರು ಮುಖ್ಯಮಂತ್ರಿಗಳು ಆದರು. ಏನೆಲ್ಲಾ ವಿದ್ಯಮಾನಗಳು ನಡೆದವು. ಯಾರ್ಯಾರು ನನ್ನ ಬಳಿ ಬಂದಿದ್ದರು ಎಂಬುದು ಇಲ್ಲಿರುವ ಬಿಜೆಪಿಯ ಮಿತ್ರರಿಗೂ ಗೊತ್ತಿದೆ ಎಂದು ಪ್ರತಿಪಕ್ಷದತ್ತ ಬೆರಳು ತೋರಿ ಹೇಳಿದರು.

“ಧರ್ಮಸಿಂಗ್‌ ಸಾವಿಗೆ ನಾನು ಕಾರಣ ಎಂದು ಯಡಿಯೂರಪ್ಪ ಆರೋಪ ಮಾಡಿದ್ದರು. ಆಗ ನನಗೆ ಎಷ್ಟು ನೋವಾಯಿತು ಎಂಬುದು ನನಗೆ ಗೊತ್ತಿದೆ. ಅದೇ ರೀತಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರದೇ ಸಂಪುಟದ ಸಚಿವರು ಸೇರಿ 22 ಶಾಸಕರು ಚೆನ್ನೈ-ಗೋವಾಗೆ ಹೋಗಿದ್ದಾಗ ಅವರ ಸ್ಥಿತಿ ಹೇಗಿತ್ತು.

ಮೈಸೂರಿನಲ್ಲಿ ಕೆಲವು ಶಾಸಕರು ಯೋಗ ಮಾಡುತ್ತಿದ್ದರೆ, 57 ಶಾಸಕರು ಹೈದರಾಬಾದ್‌ ರೆಸಾರ್ಟ್‌ನಲ್ಲಿ ಸರ್ಕಾರ ಪತನಗೊಳಿಸಲು ಮುಂದಾಗಿದ್ದಾಗ ಯಡಿಯೂರಪ್ಪ ಅವರೇ, ನನಗೆ ಇದು ಅನಿರೀಕ್ಷಿತ ಎಂದು ಹೇಳ್ತಾರೆ. ಈಗ ನಾನು ಅದೇ ಸ್ಥಾನದಲ್ಲಿದ್ದೇನೆ. ರಾಜ್ಯ ರಾಜಕಾರಣದಲ್ಲಿ ಇಂತಹ ಘಟನೆ , ಡ್ರಾಮಾಗಳು ಹೀಗೇ ನಡೆಯುತ್ತಿದ್ದರೆ ಎಲ್ಲಿಗೆ ಹೋಗಿ ನಿಲ್ಲುತ್ತೇವೆ ಎಂಬುದನ್ನು ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

ಮೊದಲ ದಿನದಿಂದಲೇ ಸಂಚು: 2013ರ ವಿಧಾನಸಭೆ ಚುನಾವಣೆ ಫ‌ಲಿತಾಂಶ ಬಂದ ನಂತರವೂ ನನಗೆ ಬಿಜೆಪಿಯ ಕೇಂದ್ರ ನಾಯಕರಿಂದಲೇ ಆಫ‌ರ್‌ ಬಂದಿತ್ತು. ನಾನು ಇಲ್ಲಿ ಶಾಶ್ವತವಾಗಿ ಮುಖ್ಯಮಂತ್ರಿ ಸ್ಥಾನದಲ್ಲೇ ಇರಬೇಕು ಎಂದಿದ್ದರೆ ನಾನು ಎಂದೋ ತೀರ್ಮಾನ ಮಾಡುತ್ತಿದ್ದೆ. ಆಗ, ನಿಮಗೆ ಇಷ್ಟೆಲ್ಲಾ ಸರ್ಕಸ್ಸು ಮಾಡುವ ಛಾನ್ಸೇ ಇರುತ್ತಿರಲಿಲ್ಲ.

ಆದರೆ, ಒಮ್ಮೆ ನನ್ನ ಜೀವನದಲ್ಲಿ ನಮ್ಮ ತಂದೆಯ ನಿರ್ಧಾರಕ್ಕೆ ವಿರುದ್ಧವಾಗಿ ಹೋಗಿ ಅವರ ಮನಸ್ಸಿಗೆ ನೋವು ಮಾಡಿದ್ದೆ. ಮತ್ತೆ ಅಂತಹ ತಪ್ಪು ಮಾಡಬಾರದು ಎಂದು ಸುಮ್ಮನಾದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹದಿನಾಲ್ಕು ತಿಂಗಳಿನಿಂದ ಒಂದೇ ಒಂದು ದಿನ ನೆಮ್ಮದಿಯಾಗಿ ಸರ್ಕಾರ ನಡೆಸಲು ಇವರು ಬಿಡಲಿಲ್ಲ. ಮೊದಲ ದಿನದಿಂದಲೇ ಸರ್ಕಾರ ಬೀಳಿಸಲು ಸಂಚು ರೂಪಿಸಿದರು ಎಂದು ದೂರಿದರು.

ಯಾರೋ ಬಿಜೆಪಿ ನಾಯಕರೊಬ್ಬರು ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿದ್ದಾರೆ. ಅಂತಹ ಪರಿಸ್ಥಿತಿಯನ್ನು ದೇವರು ನನಗೆ ಕೊಟ್ಟಿಲ್ಲ. ಜೀವನದಲ್ಲಿ ಎಂತಹ ಸವಾಲು ಎದುರಾದರೂ ಸಮರ್ಥವಾಗಿ ಎದುರಿಸುವ ಶಕ್ತಿ ನನಗಿದೆ. ದೇವೇಗೌಡರ ಕುಟುಂಬ ಮಾಟ-ಮಂತ್ರ ಮಾಡುತ್ತದೆ ಎಂದು ಲೇವಡಿ ಮಾಡುತ್ತಾರೆ. ನಮಗೆ ದೇವರ ಮೇಲೆ ಭಯ-ಭಕ್ತಿ ಇದೆ. ರೇವಣ್ಣ ದೇವಸ್ಥಾನಕ್ಕೆ ಹೋಗುತ್ತಾರೆ, ಬಿಜೆಪಿಯವರೂ ದೇವಸ್ಥಾನಕ್ಕೆ ಹೋಗ್ತಾರೆ, ಅಲ್ಲಿ ನಿಂಬೆ ಹಣ್ಣು ಕೊಟ್ಟರೆ ತೆಗೆದುಕೊಳ್ಳುವುದಿಲ್ಲವೇ? ಪ್ರಧಾನಿ ಸ್ಥಾನವನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಪಂಚಾಯಿತಿಯಿಂದ ಪ್ರಧಾನಿ ಹುದ್ದೆವರೆಗೂ ಎಲ್ಲ ನೋಡಿದ್ದೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next