Advertisement

ಮಸ್ಕಿ ಪುರಸಭೆ ಕಚೇರಿ ಮುಂದೆ ಹೈಡ್ರಾಮಾ

04:30 PM Dec 16, 2021 | Team Udayavani |

ಮಸ್ಕಿ: ಮಸ್ಕಿ ಪುರಸಭೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಸಮಯ ಗೊಂದಲದಿಂದಾಗಿ ಕಚೇರಿ ಮುಂದೆ ಕೆಲಕಾಲ ಹೈಡ್ರಾಮ ನಡೆದ ಪ್ರಸಂಗ ಬುಧವಾರ ನಡೆಯಿತು.

Advertisement

ನಾಮಪತ್ರ ಸಲ್ಲಿಸಲು ಬುಧವಾರ ಮಧ್ಯಾಹ್ನ 3ಗಂಟೆ ಕೊನೆ ಸಮಯ ಆಗಿತ್ತು. 19 ವಾರ್ಡ್‌ನ ಪಕ್ಷವೊಂದರ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಲು ಬಂದಾಗ ಮತ್ತೊಂದು ಪಕ್ಷದ ಕಾರ್ಯಕರ್ತರು ಅಡ್ಡಿ ಪಡಿಸಿದರು. ಇದರಿಂದ ಬಿಜೆಪಿ, ಜೆಡಿಎಸ್‌ ಹಾಗೂ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿಗಳು ಚುನಾವಣಾಧಿಕಾರಿ ಜೊತೆ ಮಾತಿನ ಚಕಮಕಿ ನಡೆಸಿದ್ದರಿಂದ ಕೆಲ ಕಾಲ ಬೀಗುವಿನ ವಾತಾವರಣ ನಿರ್ಮಾಣಗೊಂಡಿತು.

ಸುದ್ದಿ ತಿಳಿದು ಕಚೇರಿಗೆ ದೌಡಾಯಿಸಿದ ನಾಲ್ಕು ಪಕ್ಷಗಳ ಕಾರ್ಯಕರ್ತರು, ಅಧಿಕಾರಿ ಜೊತೆ ಮಾತಿನ ಚಕಮಕಿ ನಡೆಸಿದರು. ಸುದ್ದಿ ತಿಳಿಯುತ್ತಲೇ ತಹಶೀಲ್ದಾರ್‌ ಕವಿತಾ ಆರ್‌. ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂಜೀವ್‌ ಕುಮಾರ, ಸಬ್‌ ಇನ್‌ ಸ್ಪೆಕ್ಟರ್‌ ಸಿದ್ಧರಾಮ ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರನ್ನು ಚದುರಿಸಿದರು.

ಹಾಲಿ-ಮಾಜಿ ಹಾಜರು

ಘಟನೆ ವಿಷಯ ತಿಳಿದು ಶಾಸಕ ಆರ್‌. ಬಸನಗೌಡ ತುರ್ವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಕೆ ಕಚೇರಿಗೆ ಆಗಮಿಸಿದರು. ಸಮಯ ಬಗ್ಗೆ ಸ್ಪಷ್ಟನೆ ನೀಡುವಂತೆ ಚುನಾವಣಾಧಿಕಾರಿ ರಂಗನಾಥ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ ತಹಶೀಲ್ದಾರ್‌, ಪೊಲೀಸ್‌ ಅಧಿಕಾರಿಗಳ ಜತೆಗೂ ವಾಗ್ವಾದ ನಡೆಸಿದರು.

Advertisement

ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಕೆಲಸ ಮಾಡಿ ಯಾಕೆ ಹೀಗೆ ಗೊಂದಲ ಮಾಡುತ್ತೀರಿ? 3ಗಂಟೆಯೊಳಗೆ ಬಾರದೇ ಇರುವ ಅಭ್ಯರ್ಥಿಗಳ ನಾಮಪತ್ರ ತೆಗೆದುಕೊಳ್ಳುವುದು ಏಕೆ? ಕೆಲವರು ದಾಖಲೆ ನೀಡಲು ಸಮಯ ಮೀರಿ ಬಂದಿದ್ದಾರೆ. ಅಂತವರಿಂದ ದಾಖಲೆ ಪಡೆಯುವುದು ಯಾಕೆ? ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ತಹಶೀಲ್ದಾರ್‌ನ್ನು ಪ್ರಶ್ನಿಸಿದರು.

ಇನ್ನು ಹಾಲಿ ಶಾಸಕ ಆರ್‌.ಬಸನಗೌಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ ತಹಶೀಲ್ದಾರ್‌ ಜತೆ ಮಾತುಕತೆ ನಡೆಸಿದರು. ಈಗ ಬಂದ ಎಲ್ಲರ ನಾಮಪತ್ರ ಪಡೆಯಿರಿ, ಪರಿಶೀಲನೆ ವೇಳೆ ದಾಖಲೆ ನೋಡಬೇಕು ಎಂದರು. ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಿ ಅವರ ನಿರ್ದೇಶನದಂತೆ ಕೆಲಸ ಮಾಡಲಾಗುತ್ತದೆ ಎಂದು ತಹಶೀಲ್ದಾರ್‌ ಪ್ರತಿಕ್ರಿಯೆ ನೀಡಿದರು.

ನೂಕು ನುಗ್ಗಲು

23 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನವಾಗಿದ್ದರಿಂದ ಪುರಸಭೆ ಒಳಗೆ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾದ ಘಟನೆ ನಡೆಯಿತು. 1ರಿಂದ 11 ಹಾಗೂ 12ರಿಂದ 23 ಎರಡು ಚುನಾವಣೆ ಕಚೇರಿಗಳ ಮುಂದೆ ಆಕಾಂಕ್ಷೆಗಳು ತಮ್ಮ-ತಮ್ಮ ದಾಖಲೆಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next