ದುಬೈ: ಕೊನೆಯಲ್ಲಿ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ , ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗಳಿಂದ ಭರ್ಜರಿ ಗಳಿಸಿದೆ.
ಹೈದರಾಬಾದ್ ನೀಡಿದ 159 ರನ್ ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗುರಿ ಬೆನ್ನತ್ತಿದ ರಾಜಸ್ಥಾನ್ ಗೆ ಆರಂಭದಲ್ಲೇ ಆಘಾತ ಎದುರಾಯಿತು. ಬೆನ್ ಸ್ಟ್ರೋಕ್ಸ್ ಕೇವಲ 5 ರನ್ ಗಳಿಸಿ ಖಲೀಲ್ ಆಹ್ಮದ್ ಗೆ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 1 ಸಿಕ್ಸ್, 1 ಬೌಂಡರಿ ನೆರವಿನಿಂದ 16 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ನಾಯಕ ಸ್ಟೀವನ್ ಸ್ಮಿತ್ ಕೂಡ 5 ರನ್ ಗಳಿಸಿದ್ದಾಗ ರನೌಟ್ ಆಗಿ ಬಂದ ಹಾದಿಯಲ್ಲೇ ಹಿಂದಿರುಗಿದರು. ನಂತರ ಬಂದ ಸಂಜು ಸ್ಯಾಮ್ಸನ್ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. 25 ಎಸೆತಗಳಲ್ಲಿ 26 ರನ್ ಗಳಿಸಿ ರಷಿದ್ ಖಾನ್ ಬೌಲಿಂಗ್ ನಲ್ಲಿ ಬೈರಸ್ ಸ್ಟೋ ಗೆ ಕ್ಯಾಚಿತ್ತರು. ಕಳೆದ ಹಲವು ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿರುವ ರಾಬಿನ್ ಉತ್ತಪ್ಪ ಕೂಡ 18 ರನ್ ಗಳಿಸಿದ್ದಾಗ ರಷೀದ್ ಖಾನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ನಂತರ ಬಂದ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಬಿರುಸಿನ ಬ್ಯಾಟಿಂಗ್ ನಡೆಸಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಈ ಜೋಡಿ ಪಂದ್ಯವನ್ನು ಸಂಪೂರ್ಣವಾಗಿ ರಾಯಲ್ಸ್ ಕಡೆಗೆ ವಾಲಿಸಿದರು. ಪರಾಗ್ 26 ಎಸೆತಗಳಲ್ಲಿ 2 ಸಿಕ್ಸ್ ಮತ್ತು 2 ಪೋರ್ ಗಳ ನೆರವಿನಿಂದ 42 ರನ್ ಗಳಿಸಿದರೇ, ರಾಹುಲ್ ತೆವಾಟಿಯಾ, 28 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಅಂತಿಮವಾಗಿ 19.5 ಓವರ್ ಗಳಲ್ಲಿ 163 ರನ್ ಗಳಿಸಿದ ರಾಜಸ್ಥಾನ್ ಗೆಲುವಿನ ನಗೆ ಬೀರಿತು.
ಹೈದರಾಬಾದ್ ಪರ ಖಲೀಲ್ ಆಹ್ಮದ್ ಹಾಗೂ ರಷೀದ್ ಖಾನ್ ತಲಾ 2 ವಿಕೆಟ್ ಪಡೆದರು.