Advertisement
ದೇಶದ ಸ್ತ್ರೀಕುಲಕ್ಕೆ ಭೀತಿ ಮೂಡಿಸಿರುವ ಈ ವಿಚಾರದ ಕುರಿತು ಸೋಮವಾರ ಲೋಕ ಸಭೆ ಹಾಗೂ ರಾಜ್ಯಸಭೆಗಳಲ್ಲಿ ಗಂಭೀರ ಚರ್ಚೆ ನಡೆದಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ. ಕೇಂದ್ರ ಸರಕಾರವೂ ಇದಕ್ಕೆ ಸ್ಪಂದಿಸಿದ್ದು, ಅತ್ಯಾಚಾರದಂಥ ಘಟನೆಗಳಿಗೆ ಕಡಿವಾಣ ಹಾಕಲು ಕಾನೂನಿನಲ್ಲಿ ಕಠಿನ ನಿಬಂಧನೆಗಳನ್ನು ತರಲು ಸಿದ್ಧ ಎಂದು ಘೋಷಿಸಿದೆ.
ಆಗ್ರಹಗಳ ಸುರಿಮಳೆ: ಎರಡೂ ಸದನಗಳಲ್ಲಿ ಬಹುತೇಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಅತ್ಯಾಚಾರದಂಥ ಮಹಿಳಾ ದೌರ್ಜನ್ಯಗಳನ್ನು ನಿಯಂತ್ರಿಸಲು ಅನೇಕ ಸಲಹೆಗಳು ಹಾಗೂ ಆಕ್ರೋಶಭರಿತ ಆಗ್ರಹಗಳನ್ನೂ ಮುಂದಿಟ್ಟಿದ್ದಾರೆ. ಅಪರಾಧಿಗಳನ್ನು ಗಲ್ಲಿಗೇರಿಸಬೇಕು, ಕಾಲಮಿತಿಯ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರಿಗೆ ಸ್ಥಳದಲ್ಲೇ ಶಿಕ್ಷೆ ನೀಡುವಂಥ ಕಾನೂನು ಜಾರಿಯಾಗಬೇಕು, ಸಾರ್ವಜನಿಕವಾಗಿ ಥಳಿಸಿ ಹತ್ಯೆಗೈಯ್ಯಬೇಕು, ತಪ್ಪಿತಸ್ಥರ ಸಂತಾನಶಕ್ತಿ ಹರಣ ಮಾಡಬೇಕು, ಅಪರಾಧಿಗಳ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು…. ಹೀಗೆ ನಾನಾ ಆಗ್ರಹಗಳು ಕೇಳಿಬಂದಿವೆ.
Related Articles
Advertisement
ಕ್ಷಮಾದಾನಕ್ಕೆ ಅವಕಾಶವೇ ಇರಬಾರದು: ಉಪರಾಷ್ಟ್ರಪತಿಸಂಸದರೆಲ್ಲರೂ ಅತ್ಯಾಚಾರದ ವಿರುದ್ಧ ಧ್ವನಿಯೆತ್ತಿದ ಬೆನ್ನಲ್ಲೇ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು, ಇಂಥ ಘೋರ ಪ್ರಕರಣಗಳಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಲು ಅಪರಾಧಿಗಳಿಗೆ ಇರುವ ಅವಕಾಶದ ಕುರಿತು ಮರುಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಸಭೆಯಲ್ಲಿ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ ಅವರು, ‘ಅಪರಾಧಿಗಳಿಗೆ ಶಿಕ್ಷೆ ಕೊಟ್ಟ ಬಳಿಕವೂ ಆಗುವುದೇನು? ಮೇಲ್ಮನವಿ, ಕ್ಷಮಾದಾನ ಅರ್ಜಿ… ಇಂಥ ಘೋರ ಅಪರಾಧ ಮಾಡುವವರನ್ನು ಕ್ಷಮಿಸಬೇಕು ಎಂದು ಯಾರಿಗಾದರೂ ಅನಿಸುತ್ತದೆಯೇ? ಬಹಳ ವರ್ಷಗಳಿಂದಲೂ ಈ ಪ್ರಕ್ರಿಯೆ ಮುಂದುವರಿಯುತ್ತಾ ಬಂದಿದೆ. ನಾವು ನಿಜಕ್ಕೂ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಬಗ್ಗೆ ಪರಿಶೀಲಿಸಬೇಕಾಗಿದೆ’ ಎಂದಿದ್ದಾರೆ. ‘ಮಹಿಳೆಯರ ವಿರುದ್ಧದ ಅಪರಾಧ ಎನ್ನುವುದು ಸಾಮಾಜಿಕ ಕಾಯಿಲೆ. ಇದನ್ನು ಚಿಗುರಿನಲ್ಲೇ ಚಿವುಟಿಹಾಕಬೇಕು. ನಮಗೆ ಬೇಕಾಗಿರುವುದು ಹೊಸ ವಿಧೇಯಕವಲ್ಲ, ರಾಜಕೀಯ ಇಚ್ಛಾಶಕ್ತಿ’ ಎಂದೂ ಅವರು ಹೇಳಿದ್ದಾರೆ.
ಅತ್ಯಾಚಾರದ ವಿರುದ್ಧ ಆಕ್ರೋಶ ಹೊರ ಹಾಕುವ ಭರದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ‘ಥಳಿಸಿ ಹತ್ಯೆಗೈಯ್ಯಲು’ ಕರೆ ನೀಡಿದ್ದಾರೆ. ರಾಜ್ಯಸಭೆಯ ಚರ್ಚೆಯ ವೇಳೆ, ‘ನನ್ನ ಪ್ರಕಾರ, ಇಂಥ ಪ್ರಕರಣಗಳಲ್ಲಿ ಭಾಗಿಯಾಗುವ ಅತ್ಯಾಚಾರಿಗಳನ್ನು ಬೀದಿಗೆ ತಂದು, ಅವರನ್ನು ಥಳಿಸಿ ಹತ್ಯೆಗೈಯ್ಯಲು ಬಿಡಬೇಕು’ ಎಂದಿದ್ದಾರೆ. ಆರೋಪಿಗಳಿಗೆ ಮಟನ್ ಕರಿ!
ಪಶುವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಸದ್ಯ ತೆಲಂಗಾಣದ ಚೆರ್ಲಪಳ್ಳಿ ಜೈಲಿನಲ್ಲಿದ್ದು, ಮೊದಲ ದಿನ ಅವರಿಗೆ ಅನ್ನ ಮತ್ತು ಮಟನ್ ಕರಿ ನೀಡಲಾಗಿದೆ. ಜತೆಗೆ, ಅವರು ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶುವೈದ್ಯೆ ವೀಡಿಯೋ ಹುಡುಕಿದ ‘ಅಶ್ಲೀಲ’ರು!
ಹೈದರಾಬಾದ್‌ನಲ್ಲಿ ಇತ್ತೀಚೆಗೆ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಪಶುವೈದ್ಯೆಯ ಬಗ್ಗೆ ಇಡೀ ದೇಶವೇ ಮರುಕಪಡುತ್ತಿರುವ ಈ ಹೊತ್ತಿನಲ್ಲಿ, ಕೆಲವರು ಅಶ್ಲೀಲ ವೆಬ್‌ಸೈಟ್ ಒಂದರಲ್ಲಿ ಆ ವೈದ್ಯೆಯ ಅತ್ಯಾಚಾರದ ವೀಡಿಯೋಗಳ ತುಣುಕುಗಳನ್ನು ನೋಡಲು ಕಳೆದೊಂದು ವಾರದಲ್ಲಿ ಅತಿ ಹೆಚ್ಚಾಗಿ ಹುಡುಕಾಟ ನಡೆಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆ ವೆಬ್‌ಸೈಟ್‌ನ ಭಾರತೀಯ ಆವೃತ್ತಿಯಲ್ಲಿ ಟ್ರೆಂಡ್ಸ್ ವಿಭಾಗದಲ್ಲಿ ಬ್ಯಾಂಗ್ ಎಂಬ ವಿಭಾಗದಡಿ ಪಶುವೈದ್ಯೆಯ ದುರವಸ್ಥೆಯ ವೀಡಿಯೋ ತುಣುಕುಗಳಿಗಾಗಿ ಕೆಲವರು ಹುಡುಕಾಡಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನು ವರದಿಯಲ್ಲಿ ಹೇಳಲಾಗಿದೆ.