ಹೈದರಾಬಾದ್/ಅಯೋಧ್ಯೆ: ಹೈದರಾಬಾದ್‌ನ ತೆಲಂಗಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ನಾಯಕರನ್ನು ಹತ್ಯೆ ಮಾಡುವ ಸಂಚನ್ನು ವಿಫಲಗೊಳಿಸಲಾಗಿದೆ. ಪ್ರಕರಣದ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅವರು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದಾರೆ. ಅವರನ್ನು ಮೊಹಮದ್ ಅಬ್ದುಲ್ ಜಾಹೇದ್(39) ಹಾಗೂ ಆತನ ಇಬ್ಬರು ಸಹಚರರಾಗಿರುವ ಮಾಜ್ ಮತ್ತು ಸಮೀಯುದ್ದೀನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಪಾಕಿಸ್ತಾನದಲ್ಲಿರುವ ನಾಯಕನೊಬ್ಬನ ನಿರ್ದೇಶನದಂತೆ ದಾಳಿ ನಡೆಸಲು ಮುಂದಾಗಿದ್ದರು. ಅದಕ್ಕೆಂದೇ ಭಾನುವಾರದಂದು ನಾಲ್ಕು ಗ್ರೆನೇಡ್‌ಗಳನ್ನು ಸಂಗ್ರಹಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಮೊಹಮದ್ ಅಬ್ದುಲ್ ಜಾಹೇದ್‌ನ ಸಹೋದರ ಮೊಹಮದ್ ಅಬ್ದುಲ್ ಶಾಹೇದ್ ಹರ್ಕತ್-ಉಲ್-ಜಿಹಾದ್-ಎ-ಇಸ್ಲಾಮಿ ಸಂಘಟನೆಯ ಉಗ್ರನಾಗಿದ್ದು, 2005ರಲ್ಲಿ ಬೇಗಂ ಪೇಟ್ ಟಾಸ್ಕ್ಫೋರ್ಸ್ ಕಚೇರಿಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣದ ಆರೋಪಿಯಾಗಿದ್ದಾನೆ.
ಇದೇ ವೇಳೆ, ಅಯೋಧ್ಯೆಯಲ್ಲಿ ನಿಷೇಧಿ ಪಿಎಫ್ಐನ ಸದಸ್ಯ ಮೊಹಮ್ಮದ್ ಜೈದ್ ಎಂಬಾತನನ್ನು ಬಂಧಿಸಲಾಗಿದೆ. ಆತ ತಬ್ಲೀ ಜಮಾತ್‌ನ ಸದಸ್ಯನೂ ಆಗಿದ್ದಾನೆ.