ಹೈದರಾಬಾದ್ : ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಹೈದರಾಬಾದ್ ಪೊಲೀಸ್ ಕಾನ್ ಸ್ಟೆಬಲ್ ಎಸ್.ಮಹೇಶ್ ಕುಮಾರ್ ಅವರು ತಮ್ಮ ಬುತ್ತಿಯಲ್ಲಿದ್ದ ಊಟವನ್ನು ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಕಾರಣವಾಗಿದೆ.
ಈ ಮಾನವೀಯ ಕೆಲಸಕ್ಕೆ ಕಾನ್ ಸ್ಟೇಬಲ್ ಮಹೇಶ್ ಕುಮಾರ್ ಅವರಿಗೆ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರು ಕೂಡ ಭೇಷ್ ಅಂದಿದ್ದಾರೆ.
ಇದನ್ನೂ ಓದಿ : ಬೆಡ್ ಸಿಗದೆ ಪರೆದಾಡಿದ ಸೋಂಕಿತನಿಗೆ ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್ ವ್ಯವಸ್ಥೆ
ನಿನ್ನೆ(ಸೋಮವಾರ, ಮೇ 17) ರಾತ್ರಿ 8 ಗಂಟೆ ಸುಮಾರಿಗೆ ವಿ.ವಿ.ಐ.ಪಿ ವಲಯದ ಸೋಮಜಿಗುಡ ರಸ್ತೆಯಲ್ಲಿ ಎಸ್.ಮಹೇಶ್ ಕುಮಾರ್ ಕರ್ತವ್ಯದಲ್ಲಿದ್ದಾಗ, ನಾಲ್ಕು ಐದು ವರ್ಷ ವಯಸ್ಸಿನ ಇಬ್ಬರು ಸಣ್ಣ ಹುಡುಗಿಯರು ಮತ್ತು ಅವರ ತಂದೆಯೊಂದಿಗೆ ಯಶೋದಾ ಆಸ್ಪತ್ರೆಯ ಬಳಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿ ತಮ್ಮ ಊಟಕ್ಕೆಂದು ತಂದಿದ್ದ ಆಹಾರವನ್ನು ಆ ಹಸಿದ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಹೇಶ್, ನಾನು ಕರ್ತವ್ಯದಲ್ಲಿದ್ದೆ, ಯಶೋದಾ ಆಸ್ಪತ್ರೆಯ ಬಳಿ ಈ ಇಬ್ಬರು ಹೆಣ್ಣು ಮಕ್ಕಳ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದೆ. ಕೆಲವರು ಅವರಿಗೆ ಹಣ ನೀಡಿದರು. ಒಬ್ಬರು 100 ರೂಪಾಯಿಯನ್ನು ಕೊಟ್ಟು ಹೋದರು. ಆದರೇ,ಆ ಸಣ್ಣ ಮಕ್ಕಳಿಗೆ ಹೊಟ್ಟೆ ಹಸಿದಿತ್ತು, ತಿನ್ನಲು ಆಹಾರ ಬೇಕಿತ್ತು. ಲಾಕ್ ಡೌನ್ ಇದ್ದ ಕಾರಣ ಎಲ್ಲಾ ಅಂಗಡಿಗಳು ಮುಚ್ಚಿದ್ದವು. ಅವರಿಗೆ ಎಲ್ಲಿಯೂ ಹಸಿವು ತಣಿಸಲು ಆಹಾರ ಸಿಕ್ಕಿರಲಿಲ್ಲ. ನನಗೆ ಹಸಿವಿನಿಂದಿದ್ದ ಆ ಮಕ್ಕಳನ್ನು ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಬುತ್ತಿಯಲ್ಲಿದ್ದ ಆಹಾರವನ್ನು ನೀಡಿದೆ. ಅವರು ಆಹಾರವನ್ನು ನೋಡಿದ ತಕ್ಷಣ ಖುಷಿ ಪಟ್ಟಿದ್ದು, ಅದನ್ನು ತಿನ್ನುವುದರಲ್ಲಿ ಆ ಮಕ್ಕಳು ಸಂತೋಷ ಪಟ್ಟಿದ್ದು ನನಗೆ ಮನಸ್ಸು ತುಂಬಿ ಬಂತು ಎಂದರು.
ಎಸ್. ಮಹೇಶ್ ಕುಮಾರ್ ಪಂಜಗುಟ್ಟಾ ಸಂಚಾರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಮಧ್ಯಾಹ್ನ 2.00 ರಿಂದ ರಾತ್ರಿ 11.00 ರವರೆಗೆ ಅವರ ಕರ್ತವ್ಯವಾಗಿತ್ತು. “ನನ್ನ ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ತಡವಾಗುವ ಕಾರಣದಿಂದ ನಾನು ರಾತ್ರಿ ಊಟಕ್ಕೆಂದು ಮನೆಯಿಂದ ಬುತ್ತಿ ತಂದಿದ್ದೆ. ನಿನ್ನೆ ನಾನು ಈ ಮಕ್ಕಳಿಗೆ ಆಹಾರವನ್ನು ನೀಡಿದ್ದೇನೆ ಎಂದು ನನ್ನ ಹೆಂಡತಿಗೆ ಹೇಳಿದಾಗ, ಅವಳು ತುಂಬಾ ಸಂತೋಷಗೊಂಡಳು ಮತ್ತು ನನಗೆ ತಡ ರಾತ್ರಿ 11.45 ರ ಸುಮಾರಿಗೆ ನಾನು ಮನೆಗೆ ತಲುಪುತ್ತಿದ್ದಂತೆ ವಿಶೇಷ ಅಡುಗೆ ಬಡಿಸಿ ಖುಷಿ ಪಟ್ಟಳು ಎನ್ನುತ್ತಾರೆ ಎಸ್.ಮಹೇಶ್ ಕುಮಾರ್.
ಬುತ್ತಿಯಲ್ಲಿ ಏನಿತ್ತು ಎಂದು ಕೇಳಿದ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಹೇಶ್, “ಅನ್ನ, ನುಗ್ಗೆಕಾಯಿ ಸಾಂಬಾರ್ ಮತ್ತು ಚಿಕನ್ ಫ್ರೈ. ಆ ಮಕ್ಕಳು ಅದನ್ನು ಇಷ್ಟಪಟ್ಟರು” ಎಂದು ಸಂತೋಷದಿಂದ ಹೇಳಿದರು.
ಇನ್ನು, ಎಸ್.ಮಹೇಶ್ ಕುಮಾರ್ ಅವರ ಈ ಮಾನವೀಯ ಕಳಕಳಿಯನ್ನು ಮೆಚ್ಚಿದ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ : ಐ.ಎಸ್.ಪಿ.ಆರ್.ಎಲ್ ಖಾಸಗೀಕರಣ ವಿರೋಧಿಸಿ ಜನಾಂದೋಲನ ಯಾತ್ರೆ : ವಿನಯ್ ಕುಮಾರ್ ಸೊರಕೆ