ಹೈದರಾಬಾದ್: ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರ ಹೈವೋಲ್ಟೆàಜ್ ಪ್ರಚಾರಕ್ಕೆ ಸಾಕ್ಷಿಯಾದ ಹೈದರಾಬಾದ್ ನಗರ ಪಾಲಿಕೆ ಚುನಾವಣೆ ಡಿ.1 ರಂದು ನಡೆಯಲಿದ್ದು, ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್‌ಶೋದೊಂದಿಗೆ ಪ್ರಚಾರಕ್ಕೆ ತೆರೆಬಿದ್ದಿದೆ.
ಜಿಎಚ್‌ಎಂಸಿಯ 150 ವಾರ್ಡ್‌ಗಳಲ್ಲಿ 1,122 ಅಭ್ಯರ್ಥಿಗಳು ಕಣದಲ್ಲಿದ್ದು, ಮಂಗಳವಾರ ಮತದಾನ ನಡೆಯಲಿದೆ. ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಅಜೆಂಡಾದೊಂದಿಗೆ, ಜಿಎಚ್‌ಎಂಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಬಿಜೆಪಿ, ರಾಷ್ಟ್ರ ಮಟ್ಟದ ನಾಯಕರನ್ನೇ ಪ್ರಚಾರಕ್ಕೆ ಕಳುಹಿಸಿತ್ತು. ಅದರಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಭಾರೀ ಪ್ರಚಾರ ನಡೆಸಿದ್ದಾರೆ.
ಡೈನಾಸ್ಟಿ ಟು ಡೆಮಾಕ್ರಸಿ: ಪ್ರಚಾರದ ಕೊನೆಯ ದಿನವಾದ ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ನಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬಿಜೆಪಿಯು ನಗರವನ್ನು “ವಂಶಾಡಳಿತದಿಂದ ಪ್ರಜಾಸತ್ತಾತ್ಮಕ ಆಡಳಿತ'(ಡೈನಾಸ್ಟಿ ಟು ಡೆಮಾಕ್ರಸಿ)ದತ್ತ, ಭ್ರಷ್ಟಾಚಾರದಿಂದ ಪಾರದರ್ಶಕತೆಯತ್ತ ಕೊಂಡೊಯ್ಯಲಿದೆ. ಈ ಬಾರಿ ಬಿಜೆಪಿಗೆ ಒಂದು ಅವಕಾಶ ಕೊಡಿ ಎಂದು ಶಾ ಮತದಾರದಲ್ಲಿ ಮನವಿ ಮಾಡಿದ್ದಾರೆ. “ಹೈದರಾಬಾದ್ ಅನ್ನು ನವಾಬ್-ನಿಜಾಮ್ ಸಂಸ್ಕೃತಿಯಿಂದ ವಿಶ್ವದರ್ಜೆಯ ಐಟಿ ಹಬ್ ಆಗಿ ಪರಿವರ್ತಿಸಲು ಬಿಜೆಪಿ ಬಯಸಿದೆ. ನಾವು ಯಾವುದೇ ಸಮುದಾಯದ ಓಲೈಕೆಯನ್ನು ಸಹಿಸುವುದಿಲ್ಲ. ಯಾರನ್ನೂ ಎರಡನೇ ದರ್ಜೆಯ ನಾಗರಿಕರನ್ನಾಗಿ ಇರಿಸಲು ಬಯಸುವುದಿಲ್ಲ’ ಎಂದು ಶಾ ಗುಡುಗಿದ್ದಾರೆ.
ಇಲೂ ಇಲೂ ಮುಕ್ತವಾಗಿಲ್ಲ ಏಕೆ? :
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧವೂ ಕಿಡಿಕಾರಿದ ಅಮಿತ್ ಶಾ, ಕೆಸಿಆರ್ ಅವರ ಟಿಆರ್‌ಎಸ್ ಪಕ್ಷ ಮತ್ತು ಒವೈಸಿ ಅವರ ಎಐಎಂಐಎಂ ಪಕ್ಷ ಸ್ನೇಹ ಬೆಳೆಸಿದರೆ ನಮಗೇನೂ ತಕರಾರಿಲ್ಲ. ಆದರೆ, ಅದನ್ನು ಅವರು ಮುಕ್ತವಾಗಿ ಹೇಳಿಕೊಳ್ಳುತ್ತಿಲ್ಲವೇಕೆ? ನಾಲ್ಕು ಗೋಡೆಯೊಳಗೆ ಅವರು ಇಲೂ, ಇಲೂ (ಐ ಲವ್ ಯೂ) ಮಾಡಿಕೊಳ್ಳುತ್ತಿ ರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಬಿಜೆಪಿ ಯಾವ ಚುನಾವಣೆಯನ್ನೂ “ಸಣ್ಣದು’ ಎಂದು ಭಾವಿಸುವುದಿಲ್ಲ ಎಂದಿದ್ದಾರೆ.
ಟ್ರಂಪ್‌ವೊಬ್ಬರು ಬಾಕಿ: ಒವೈಸಿ ವ್ಯಂಗ್ಯ :
ನಗರ ಪಾಲಿಕೆ ಚುನಾವಣೆಗೆ ರಾಷ್ಟ್ರ ನಾಯಕರನ್ನು ಪ್ರಚಾರಕ್ಕೆ ಕರೆತಂದ ಬಿಜೆಪಿ ಬಗ್ಗೆ ವ್ಯಂಗ್ಯವಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, “ನಗರದಲ್ಲಿ ಪ್ರಚಾರಕ್ಕೆ ಬರಲು ಇನ್ನು ಬಾಕಿಯಿರುವುದು ಡೊನಾಲ್ಡ್ ಟ್ರಂಪ್ ಮಾತ್ರ’ ಎಂದು ಹೇಳಿದ್ದಾರೆ. ಲಂಗೇರ್ ಹೌಸ್‌ನಲ್ಲಿ ಪ್ರಚಾರ ನಡೆಸಿದ ಒವೈಸಿ, “ಈ ಬಾರಿಯ ಪಾಲಿಕೆ ಚುನಾವಣೆಯನ್ನು ನೋಡಿದರೆ, ಹೈದರಾಬಾದ್‌ನ ಜನತೆ ಹೊಸ ಪ್ರಧಾನಿಯನ್ನೇ ಆಯ್ಕೆ ಮಾಡುತ್ತಿದ್ದಾರೋ ಎಂಬ ಅನುಮಾನ ಬರುತ್ತಿದೆ’ ಎಂದಿದ್ದಾರೆ.