Advertisement
ಈ ಫೀಲ್ಡಿಂಗ್ ನಿರ್ಬಂಧದ ಲಾಭ ಎತ್ತಿದ ಮೊದಲಿಗರೆಂದರೆ ಭಾರತದ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ನ್ಯೂಜಿಲ್ಯಾಂಡಿನ ಮಾರ್ಕ್ ಗ್ರೇಟ್‌ಬ್ಯಾಚ್. 1992ರ ಏಕದಿನ ವಿಶ್ವಕಪ್‌ನಲ್ಲಿ ಇವರಿಬ್ಬರು ಮೊದಲ 15 ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗಿಗೆ ಮುಂದಾಗಿದ್ದರು. ಇದನ್ನು ಇನ್ನಷ್ಟು ಸ್ಫೋಟಕಗೊಳಿಸಿ 15 ಓವರ್‌ಗಳಲ್ಲೇ 100 ರನ್ ಪೇರಿಸಿಲು ಸಾಧ್ಯ ಎಂದು ತೋರಿಸಿಕೊಟ್ಟವರು ಶ್ರೀಲಂಕಾದ ಡ್ಯಾಶಿಂಗ್ ಓಪನರ್ ಸನತ್ ಜಯಸೂರ್ಯ. ಅಂದು ಅರ್ಜುನ ರಣರುಂಗ ಸಾರಥ್ಯದ ಶ್ರೀಲಂಕಾ ವಿಶ್ವಕಪ್ ಗೆಲ್ಲಲು ಜಯಸೂರ್ಯ ಅವರ ಬ್ಯಾಟಿಂಗ್ ಅಬ್ಬರವೇ ಮುಖ್ಯ ಕಾರಣವಾಗಿತ್ತು. ಟಿ20 ಯುಗ ಆರಂಭಗೊಂಡ ಬಳಿಕವಂತೂ ಪ್ರತಿಯೊಂದು ಅವಧಿಯೂ “ಪವರ್ ಪ್ಲೇ’ ಆಗಿಯೇ ಗೋಚರಿಸಿದೆ. ಅಂದು ಏಕದಿನ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ದಾಖಲಾಗುತ್ತಿದ್ದ ಮೊತ್ತ ಇಂದು ಟಿ20 ಇನ್ನಿಂಗ್ಸ್‌ನಲ್ಲೇ ರಾಶಿ ಬೀಳುತ್ತದೆ!
ಇಂಥ ಹೊಡಿಬಡಿ ಜಮಾನಾದಲ್ಲಿ, ಟಿ20 ಪವರ್ ಪ್ಲೇ ಅವಧಿಯಲ್ಲಿ ತಂಡವೊಂದು ರನ್ನಿಗಾಗಿ ಪರದಾಡಿದರೆ ಅದು ದೊಡ್ಡ ಅಚ್ಚರಿಯಾಗಿ ಕಾಣುತ್ತದೆ. ರಾಜಸ್ಥಾನ್ ರಾಯಲ್ಸ್ ಎದುರಿನ ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡುವ ವೇಳೆ “ಆರೇಂಜ್ ಆರ್ಮಿ’ ಖ್ಯಾತಿಯ ಸನ್‌ರೈಸರ್ ಹೈದರಾಬಾದ್ ಕೂಡ ಇಂಥದೇ ಅವಸ್ಥೆಗೆ ಸಿಲುಕಿತು. ಅದು 3 ವಿಕೆಟಿಗೆ ಕೇವಲ 14 ರನ್ ಮಾಡಿತ್ತು! ನಾಯಕ ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ ಮತ್ತು ನಿಕೋಲಸ್ ಪೂರಣ್ 4.5 ಓವರ್‌ಗಳಲ್ಲಿ ಔಟಾಗಿ ಪೆವಿಲಿಯನ್ ಸೇರಿಯಾಗಿತ್ತು. ಈ 3 ವಿಕೆಟ್ ಬಿದ್ದಾಗ ಹೈದರಾಬಾದ್ ಗಳಿಕೆ ಕೇವಲ 9 ರನ್. ಇದು ಐಪಿಎಲ್ ಇತಿಹಾಸದ ಪವರ್ ಪ್ಲೇ ಅವಧಿಯಲ್ಲಿ ದಾಖಲಾದ ಕನಿಷ್ಠ ಮೊತ್ತದ ಜಂಟಿ ದಾಖಲೆ. 2009ರ ಆರ್‌ಸಿಬಿ ಎದುರಿನ ಕೇಪ್‌ಟೌನ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 2 ವಿಕೆಟಿಗೆ 14 ರನ್ ಗಳಿಸಿತ್ತು. 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಒಮ್ಮೆ 15 ರನ್, 2 ಸಲ 16 ರನ್ ಗಳಿಸಿತ್ತು. ಇವುಗಳ ಅಂಕಿಅಂಶ ಇಲ್ಲಿದೆ.