ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಟಿ 20 ಪಂದ್ಯದ ಟಿಕೆಟ್ ಪಡೆಯಲು ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ ನಂತರ ಜಿಮ್ಖಾನಾ ಮೈದಾನದಲ್ಲಿ ಗುರುವಾರ ಕಾಲ್ತುಳಿತ ಸಂಭವಿಸಿದೆ.
ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.ಕನಿಷ್ಠ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿ ಲಭ್ಯವಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯರೂ ಸೇರಿ ಸ್ಥಳದಲ್ಲಿ ಭಾರಿ ಸಂಖ್ಯೆಯ ಜನರು ಜಮಾಯಿಸುತ್ತಿದ್ದಂತೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.ಬುಧವಾರವೂ ಸಹ ಸಾವಿರಾರು ಅಭಿಮಾನಿಗಳು ಟಿಕೆಟ್‌ಗಾಗಿ ಜಿಮ್ಖಾನಾದಲ್ಲಿ ಜಮಾಯಿಸಿದಾಗ ಗದ್ದಲ ಉಂಟಾಗಿತ್ತು.
ಇದನ್ನೂ ಓದಿ: ಮಹಾರಾಷ್ಟ್ರದ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ರವೀನಾ ಟಂಡನ್
ಕಳೆದ ಮೂರು ವರ್ಷಗಳಿಂದ ಉನ್ನತ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗದ ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಅಭಿಮಾನಿಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವೀಕ್ಷಿಸಲು ಉತ್ಸುಕರಾಗಿದ್ದು, ಜಿಮ್ಖಾನಾದಲ್ಲಿ, ಬೆಳಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಇಂದು ಸ್ಥಳದಲ್ಲಾದ ಅವ್ಯವಸ್ಥೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾದ ಅನಿವಾರ್ಯತೆ ಎದುರಾಯಿತು.