ಹೈದರಾಬಾದ್: ಪಶುವೈದ್ಯೆಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆ. ಆದರೆ ಈ ಎನ್ ಕೌಂಟರ್ ಪೂರ್ವನಿಯೋಜಿತವೆಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಶಂಷಾಬಾದ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಘಟನೆಯ ಬಳಿಕ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ, ಇದು ಪೂರ್ವ ನಿಯೋಜಿತ ಕೆಲಸವಲ್ಲ. ತಮ್ಮ ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಆರಿಫ್, ನವೀನ್, ಶಿವ ಮತ್ತು ಚನ್ನಕೇಶವುಲು ಅವರನ್ನು ಇಂದು ಮುಂಜಾನೆ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಘಟನೆಯ ಮರುಸೃಷ್ಠಿಯ ವೇಳೆ ಆರೋಪಿಗಳು ಪೊಲೀಸರ ರಿವಾಲ್ವರ್ ಕಸಿಯಲು ಯತ್ನಿಸಿದ್ದರು. ಇದರೊಂದಿಗೆ ಪೊಲೀಸರ ಮೇಲೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.
ಇದರಿಂದಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ನಾಲ್ವರೂ ಆರೋಪಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಸೈದರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸರ ಕ್ರಮಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.