ಹೈದರಾಬಾದ್: ಮುಂದಿನ ಮೂರು ವರ್ಷಗಳಲ್ಲಿ ಹೈದರಾಬಾದ್ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರೆ ತಂಡದ ಆಟಗಾರರಿಗೆ ದುಬಾರಿ ಉಡುಗೊರೆ ಮತ್ತು ಬೃಹತ್ ನಗದು ಬಹುಮಾನ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಅಧ್ಯಕ್ಷ ಜಗನ್ ಮೋಹನ್ ರಾವ್ ಅರಶಿನಪಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ(ಫೆ.20 ರಂದು) ರಣಜಿ ಟ್ರೋಫಿ ಪ್ಲೇಟ್ ಲೀಗ್ ಗೆದ್ದ ನಂತರ ಜಗನ್ ಮೋಹನ್ ರಾವ್ ಹೈದರಾಬಾದ್ ತಂಡಕ್ಕೆ 10 ಲಕ್ಷ ರೂ. ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 50,000 ರೂ. ನಗದು ಬಹುಮಾನ ನೀಡಿದ್ದಾರೆ.
ತನಯ್ ತ್ಯಾಗರಾಜನ್, ನಿತೇಶ್ ರೆಡ್ಡಿ ಮತ್ತು ಪ್ರಗ್ನಯ್ ರೆಡ್ಡಿ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ ಹೈದರಾಬಾದ್ ತಂಡ ರಣಜಿ ಟ್ರೋಫಿ ಪ್ಲೇಟ್ ಲೀಗ್ ನ ಫೈನಲ್ ಪಂದ್ಯದಲ್ಲಿ ಮೇಘಾಲಯವನ್ನು ಸೋಲಿಸಿತು.
ತ್ಯಾಗರಾಜನ್ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಪಡೆದರು (ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಐದು ವಿಕೆಟ್‌ಗಳು) ಮತ್ತು ಹೈದರಾಬಾದ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಶತಕವನ್ನು ಸಿಡಿಸಿದರು.
ಪಂದ್ಯದ ನಂತರ ಹೈದರಾಬಾದ್ ನಾಯಕ ತಿಲಕ್ ವರ್ಮಾ ಅವರಿಗೆ ಜಗನ್ ಮೋಹನ್ ರಾವ್ ಅವರು ರಣಜಿ ಟ್ರೋಫಿ ಪ್ಲೇಟ್ ನ್ನು ನೀಡಿದರು. ಈ ವೇಳೆ ಅವರು ಭವಿಷ್ಯದಲ್ಲಿ (ಮೂರು ವರ್ಷದಲ್ಲಿ) ರಣಜಿ ಟ್ರೋಫಿ ಎಲೈಟ್ ಲೀಗ್ ನ್ನು ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರನಿಗೆ ಬಿಎಂಡಬ್ಲ್ಯು ಕಾರು ಮತ್ತು 1 ಕೋಟಿ ರೂ. ಹಣವನ್ನು ಉಡುಗೊರೆಯಾಗಿ ನೀಡುವುದಾಗಿ ರಾವ್ ಹೇಳಿದ್ದಾರೆ.
ಈ ಬಗ್ಗೆ ಅವರು ʼಎಕ್ಸ್ʼ ನಲ್ಲಿ ಫೋಟೋ ಕೂಡ ಹಂಚಿಕೊಂಡು ಹೇಳಿದ್ದಾರೆ.