Advertisement

Hyderabad; ನಿಖಾಬ್ ತೆಗೆಯುವಂತೆ ಹೇಳಿದ ಬಿಜೆಪಿ ಅಭ್ಯರ್ಥಿ ಮಾಧವಿ ಮೇಲೆ ಕೇಸ್

08:05 PM May 13, 2024 | Team Udayavani |

ಹೈದರಾಬಾದ್: ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಸೋಮವಾರ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳಾ ಮತದಾರರ ಗುರುತು ಚೀಟಿಗಳನ್ನು ಪರಿಶೀಲಿಸುತ್ತಿರುವ ವಿಡಿಯೋ ವಿವಾದವನ್ನು ಹುಟ್ಟುಹಾಕಿದೆ. ಪ್ರಕರಣದ ಬಳಿಕ ಮಾಧವಿ ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ವೈರಲ್ ಆದ ವಿಡಿಯೋದಲ್ಲಿ, ಮಾಧವಿ ಲತಾ ಅವರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ಪರಿಶೀಲನೆ ನಡೆಸಿದ್ದು, ‘ನಿಖಾಬ್’ (ಮುಖದ ಮುಸುಕನ್ನು) ತೆಗೆದುಹಾಕುವಂತೆ ನಿರ್ದಿಷ್ಟವಾಗಿ ಕೇಳಿದ್ದಾರೆ. ಎಷ್ಟು ವರ್ಷಗಳ ಹಿಂದೆ ನೀವು ಮತದಾರರ ಕಾರ್ಡ್ ಮಾಡಿದ್ದೀರಿ? ಎಂದು ಪ್ರಶ್ನಿಸಿ ಹೆಚ್ಚುವರಿ ಪರಿಶೀಲನೆಗಾಗಿ ಆಧಾರ್ ಕಾರ್ಡ್‌ಗಳನ್ನು ಸಹ ಕೇಳಿದ್ದಾರೆ.

ತನ್ನ ಕ್ರಮವನ್ನು ಸಮರ್ಥಿಸಿಕೊಂಡ ಮಾಧವಿ ಲತಾ, “ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ ನಾನೊಬ್ಬ ಮಹಿಳೆಯಾಗಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡವರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಇದೆ. ನಾನು ಅವರ ಬಳಿ ವಿನಂತಿಸಿದ್ದೇನೆ ಮಾತ್ರ. ದಯವಿಟ್ಟು ಐಡಿ ಕಾರ್ಡ್‌ಗಳನ್ನು ಪರಿಶೀಲಿಸಬಹುದೇ ಎಂದು ಕೇಳಿದ್ದೇನೆ. ಯಾರಾದರೂ ಅದನ್ನು ದೊಡ್ಡ ವಿವಾದ ಮಾಡಲು ಬಯಸಿದರೆ, ಅವರು ಹೆದರಿದ್ದಾರೆ ಎಂದರ್ಥ” ಎಂದು ಹೇಳಿದ್ದಾರೆ.

ಮಾಧವಿ ಲತಾ ಅವರು ಹೈದರಾಬಾದ್‌ನ ಹಾಲಿ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸಮರ ಸಾರಿ ದೇಶದ ಗಮನ ಸೆಳೆದಿದ್ದಾರೆ. ಬಿಆರ್‌ಎಸ್ ನಾಯಕ ಗದ್ದಂ ಶ್ರೀನಿವಾಸ್ ಯಾದವ್ ಕೂಡ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next