ಗೊರೇಬಾಳ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಎರಡನೇ ದಿನ ಬುಧವಾರ ಸಿಂಧನೂರು ತಾಲೂಕಿನಲ್ಲಿ ಭಾಗಶಃ ಯಶಸ್ವಿಯಾಗಿದೆ.
ಬಂದ್ ಪ್ರಯುಕ್ತ ಸಿಂಧನೂರು ನಗರದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ದೇಶದ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತ 1991ರ ಹೊಸ ಆರ್ಥಿಕ ನೀತಿಗಳನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಹಳಷ್ಟು ವೇಗವಾಗಿ ಜಾರಿಗೆ ತರುತ್ತಿದೆ. ಕಾರ್ಮಿಕ ಕಾನೂನುಗಳನ್ನು ತಿದ್ದಪಡಿ ಮಾಡುವ ಮೂಲಕ ಮತ್ತೂಮ್ಮೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ, ಶೋಷಣೆಗೆ ದಾರಿ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕ ಉದ್ಯಮಗಳಲ್ಲಿನ ಬಂಡವಾಳವನ್ನು ಹಿಂಪಡೆಯುವ ಮೂಲಕ ಖಾಸಗೀಕರಣದ ಹುನ್ನಾರ ನಡೆಸುತ್ತಿದೆ. ದೇಶಕ್ಕೆ ಅನ್ನಕೊಡುವ ರೈತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ಸೇವೆಯನ್ನು ಮಾಡುತ್ತಿರುವ ನೌಕರರು, ಕೂಲಿಯನ್ನು ನಂಬಿ ಬದುಕುತ್ತಿರುವ ಕೃಷಿ ಕೂಲಿಕಾರರು ಕಠಿಣ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳೇ ಕಾರಣವಾಗಿವೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.
ಎಲ್ಲ ಕಾರ್ಮಿಕರಿಗೆ 18 ಸಾವಿರ ವೇತನ ನೀಡಬೇಕು. ದುಡಿಯುವ ಜನರಿಗೆ ಕನಿಷ್ಠ 6 ಸಾವಿರ ಪಿಂಚಣಿ, ಹಮಾಲಿ ಕಾರ್ಮಿಕರಿಗೆ ಉಚಿತ ನಿವೇಶನ-ಮನೆ ನೀಡಬೇಕು. ಉದ್ದೇಶಿತ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಹಾಗೂ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು. ಎಲ್ಲ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸಬೇಕು ಎಂಬುದು ಸೇರಿ 17 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಬಾಷುಮಿಯಾ, ದೇವೇಂದ್ರಗೌಡ, ಡಿ.ಎಚ್.ಕಂಬಳಿ, ನರಸಿಂಹಪ್ಪ, ಯಂಕಪ್ಪ ಕೆಂಗಲ್, ಹುಲಿಗಯ್ಯ, ಶರಣಬಸವ, ಮರಿಸ್ವಾಮಿ, ತಿರುಮಲರಾವ್, ಭೀಮರಾಯ್, ರೇಣುಕಮ್ಮ, ವಿಶಾಲಾಕ್ಷಮ್ಮ ಇತರರು ಪಾಲ್ಗೊಂಡಿದ್ದರು.