ಬೆಂಗಳೂರು: ಪತ್ನಿ ಪರಪುರುಷನ ಜತೆ ಆತ್ಮೀಯತೆ ಹೊಂದಿದ್ದಾಳೆ ಎಂದು ಅನುಮಾನಗೊಂಡ ಪತಿಯೊಬ್ಬ ಆಕೆಗೆ ಚಾಕುವಿನಿಂದ ಇರಿದಿರುವ ಘಟನೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರ ನಿವಾಸಿ ನವೀನ್(42) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ, ಪತ್ನಿ ಬಿಂದು(33) ಎಂಬಾಕೆಗೆ ಚಾಕುವಿನಿಂದ ಇರಿದಿದ್ದ. 2012ರಲ್ಲಿ ಬಿಂದು, ನವೀನ್‌ನನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೆ.ಪಿ.ನಗರದಲ್ಲಿ ವಾಸವಾಗಿದ್ದಾರೆ. ಬಿಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಆರೋಪಿ ಕೂಡ ಮತ್ತೂಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಮದುವೆಯಾದಗಿನಿಂದಲೂ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಆರೋಪಿ, ಆಕೆ ಯಾರೊಂದಿಗೂ ಫೋನ್‌ನ್ನಾಗಲಿ, ನೇರವಾಗಿಯಾಗಲಿ ಮಾತಾಡುವಂತಿಲ್ಲ. ಅದೇ ವಿಚಾರಕ್ಕೆ ಜಗಳ ಮಾಡುತ್ತಿದ್ದ. ಈ ಮಧ್ಯೆ 2023ರಲ್ಲಿ ಬನ್ನೇರುಘಟ್ಟ ಕಾಡಿಗೆ ಕರೆದೊಯ್ದಾಗಲು ಕಬ್ಬಿಣ ರಾಡ್‌ನಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದರು.
2024ರ ಮಾ.31ರಂದು ಸಂಜೆ 6 ಗಂಟೆಗೆ ಬಿಂದು ಅವರ ಸಹೋದ್ಯೋಗಿ ಮಂಜುನಾಥ್ ಎಂಬಾತ ಕೆಲಸ ವಿಚಾರ ಮಾತನಾಡಲು ಮನೆಗೆ ಬಂದಿದ್ದರು. ಅದೇ ವೇಳೆ ಮನೆಗೆ ಬಂದ ಪತಿ ನವೀನ್, ಪತ್ನಿ ಮತ್ತು ಮಂಜುನಾಥ್ ನಡುವೆ ಅಕ್ರಮ ಸಂಬಂಧ ಕಲ್ಪಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಂಜುನಾಥ್‌ನನ್ನು ಮನೆಯಿಂದ ಕಳುಹಿಸಿದ್ದಾನೆ. ಬಳಿಕ ಚಾಕುವಿನಿಂದ ಪತ್ನಿಯ ಎದೆ, ಮೊಣ ಕೈ ಹಾಗೂ ದೇಹದ ಇತೆರೆಡೆ ಇರಿದಿದ್ದಾನೆ. ಬಳಿಕ ಬಿಂದು ಅವರ ಪುತ್ರಿ ಜೋರಾಗಿ ರಕ್ಷಣೆಗಾಗಿ ಕೂಗಿಕೊಂಡಾಗ ಸ್ಥಳೀಯರು ಬಂದು ಗಲಾಟೆ ಬಿಡಿಸಿ ಕೂಡಲೇ ಬಿಂದುಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಿಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.