ಬೆಂಗಳೂರು: ಮದ್ಯ ಸೇವಿಸಲು ಹಣ ಕೊಡದಕ್ಕೆ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪರಪ್ಪನ ಅಗ್ರಹಾರದ ದೊಡ್ಡನಾಗಮಂಗಲ ನಿವಾಸಿ ಮೈಮುದಾ(28) ಚಾಕು ಇರಿತಕ್ಕೊಳಗಾದವರು. ಕೃತ್ಯ ಎಸಗಿದ ಆಕೆಯ ಪತಿ ಮೊಹಮ್ಮದ್(34) ಎಂಬಾತನನ್ನು ಬಂಧಿಸಲಾಗಿದೆ.
ರಾಯಚೂರು ಮೂಲದ ಮೊಹಮ್ಮದ್ ಹಾಗೂ ಮೈಮುದಾ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಮೊಹಮ್ಮದ್ ಕೂಲಿ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ವಿಪರೀತ ಮದ್ಯದ ಚಟ ಅಂಟಿಸಿಕೊಂಡಿದ್ದ ಆರೋಪಿ, ನಿತ್ಯ ಕುಡಿದು ಬಂದು ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಮೈಮುದಾ ಒಂದು ವರ್ಷದ ಹಿಂದೆ ತನ್ನ ಮೂವರು ಮಕ್ಕಳನ್ನು ಕರೆತಂದು ಬೆಂಗಳೂರಿನ ದೊಡ್ಡನಾಗಮಂಗಲದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಮನೆ ಕೆಲಸಕ್ಕೆ ಹೋಗುತ್ತಿದ್ದರು.
ಪದೇ ಪದೇ ಬೆಂಗಳೂರಿಗೆ ಬಂದು ಜಗಳ: ಮತ್ತೂಂದೆಡೆ ಆರೋಪಿ ಒಂದೆರಡು ತಿಂಗಳಿಗೊಮ್ಮೆ ಪತ್ನಿ ಮನೆಗೆ ಬಂದು ಕುಡಿಯಲು ಹಣ ಕೇಳುತ್ತಿದ್ದ. ಒಂದು ವೇಳೆ ಆಕೆ ಕೊಡಲು ನಿರಾಕರಿಸಿದರೆ ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ ಶನಿವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಪತ್ನಿ ಜತೆ ಗಲಾಟೆ ಮಾಡಿದ್ದಾನೆ. ಈ ವೇಳೆಯೂ ಕುಡಿಯಲು ಹಣ ಕೇಳಿದ್ದಾನೆ. ಆಗ ಆಕೆ ಹಣ ಕೊಡಲು ನಿರಾಕರಿಸಿದಾಗ ಆಕ್ರೋಶಗೊಂಡು ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಭುಜ ಹಾಗೂ ಎದೆ ಭಾಗಕ್ಕೆ ಇರಿದಿದ್ದಾನೆ. ಅದನ್ನು ಕಂಡ ಸ್ಥಳೀಯರು ಕೂಡಲೇ ಜಗಳ ಬಿಡಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಮುದಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.