ಹುಣಸೂರು: ಹೆದ್ದಾರಿ ನಿರ್ಮಿಸುವ ವೇಳೆ ಹಂಪ್ ತೆರವುಗೊಳಿಸಿದ್ದರಿಂದಾಗಿ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿ ಯಶೋಧರಪುರ ಗ್ರಾಮಸ್ಥರು ಹೆದ್ದಾರಿಯಲ್ಲಿ ಶವವಿಟ್ಟು ರಸ್ತೆ ತಡೆ ನಡೆಸಿದರು. ಎರಡು ಗಂಟೆಗೂ ಹೆಚ್ಚು ಕಾಲ ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಗ್ರಾ.ಪಂ.ಸದಸ್ಯರಾದ ಶಶಿಕುಮಾರ್, ಮುಖಂಡರಾದ ಕೃಷ್ಣಯ್ಯ, ಸತೀಶ, ಚಂದ್ರಶೇಖರ್, ವೆಂಕಟೇಶ್, ವರಮಹಾಲಕ್ಷ್ಮೀ ಹಬ್ಬದ ದಿನದಂದೇ ಅನಾಹುತ ಸಂಭವಿಸಿದ್ದರಿಂದ ಕೆರಳಿದ ಗ್ರಾಮಸ್ಥರು ತಮ್ಮೂರಿನ ಯುವಕನ ಸಾವಿಗೆ ರಸ್ತೆಯಲ್ಲಿ ಡುಬ್ಬ ನಿರ್ಮಿಸದಿರುವುದೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕುಟುಂಬಕ್ಕೆ ಆಧಾರವಾಗಿದ್ದ ಚೇತನ್ ಸಾವಿನಿಂದ ಕುಟುಂಬ ಅನಾಥವಾಗಿದೆ ಎಂದು ಪ್ರತಿಭಟನಾ ಕಾರರು ಹೆದ್ದಾರಿಯಲ್ಲೇ ಶವವಿಟ್ಟು, ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಶಾಸಕರು ಬರಬೇಕು, ರಸ್ತೆ ಡುಬ್ಬ ನಿರ್ಮಿಸಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಶಾಸಕರು ಬಂದು ರಸ್ತೆ ಡುಬ್ಬ ನಿರ್ಮಿಸುವ ಭರವಸೆ ನೀಡದ ಹೊರತು ಶವಸಂಸ್ಕಾರ ನಡೆಸುವುದಿಲ್ಲವೆಂದು ಪಟ್ಟು ಹಿಡಿದು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಮಳೆಹಾನಿಯ ಪರಿಶೀಲನೆ ನಡೆಸುತ್ತಿದ್ದ ಶಾಸಕ ಎಚ್.ಪಿ.ಮಂಜುನಾಥ್ ವಿಷಯ ತಿಳಿದು ಸ್ಥಳಕ್ಕಾಗಮಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ ಮೇರೆಗೆ ವಾರದೊಳಗೆ ದ್ವಿಪಥ ರಸ್ತೆಯ ಎರಡೂ ಬದಿ ಡುಬ್ಬ ನಿರ್ಮಿಸುವುದಾಗಿ ಅಧಿಕಾರಿಗಳು ಭರವಸೆ ಇತ್ತ ನಂತರ ನಂತರ ಪ್ರತಿಭಟನೆ ಹಿಂಪಡೆದು ಚೇತನ್ ಅಂತ್ಯಸಂಸ್ಕಾರ ನಡೆಸಲಾಯಿತು.ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಿ.ವಿ.ರವಿ, ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಬದಲಿ ಮಾರ್ಗ
ಪ್ರತಿಭಟನೆಯ ಕಾವು ಹೆಚ್ಚಾಗಿ ಹೆದ್ದಾರಿಯ ಯಶೋಧರಪುರದ ಬಳಿ ಟ್ರಾಪಿಕ್ ಜಾಮ್ ಆಗುತ್ತಿದ್ದಂತೆ ನಗರದ ಕಲ್ಕುಣಿಕೆ ವೃತ್ತದಿಂದ ಸಣ್ಣೇನಹಳ್ಳಿ ಮಾರ್ಗವಾಗಿ ಕಲ್ ಬೆಟ್ಟ ನಾಲಾ ಏರಿ ಕಡೆಯಿಂದ ವಾಹನಗಳಿಗೆ ಸಂಚರಿಸಲು ಪೊಲೀಸರು ಅವಕಾಶ ಕಲ್ಪಿಸಿಕೊಟ್ಟರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯರಾದ ಸುಭಾಷಿಣಿ, ನಂದಿನಿಚಂದ್ರು , ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಕೃಷ್ಣಯ್ಯ, ಮುಖಂಡರಾದ ಸತೀಶ, ಚಂದ್ರಶೇಖರ್, ವೆಂಕಟೇಶ್, ರಾಜು, ಪಾಲಾಕ್ಷ, ಶ್ಯಾಮಸುಂದರ್,ವಿಠಲ ಮಣಿ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.