ಹುಣಸೂರು: ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಂಕಲ್ಪ(ಟೈಲರ್ಸ್) ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಸಂವಿದಾನ ಸರ್ಕಲ್‌ನಲ್ಲಿ ಜಮಾವಣೆಗೊಂಡ ಸಂಘದ ಕಾರ್ಯಕರ್ತರು ಗೋಕುಲ ರಸ್ತೆ, ಬೈಪಾಸ್ ರಸ್ತೆ ಮೂಲಕ ಘೋಷಣೆ ಕೂಗುತ್ತಾ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ತಾಲೂಕು ಕಚೇರಿಯಲ್ಲಿ ಸತ್ಯಪ್ಪ ಮಾತನಾಡಿ ಟೈಲರ್‌ಗಳ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ. ಕೊರೋನಾ ಸಮಯ ಮತ್ತು ನಂತರದಲ್ಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕಟ್ಟಡ ಕಾರ್ಮಿಕರಿಗೆ ನೀಡುವಂತೆ ಟೈಲರ್‌ಗಳಿಗೂ ತಿಂಗಳಿಗೆ ೩ ಸಾವಿರ ರೂ ಮಾಸಾಶನ ನೀಡಬೇಕು ಹಾಗೂ ಟೈಲರ್‌ಗಳು ಕಡು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಇವರುಗಳಿಗೆ ಸ್ವಂತ ನಿವೇಶನ ಸಹ ಇರುವುದಿಲ್ಲ. ಹುಣಸೂರಿನಲ್ಲಿ ಸುಮಾರು ೨೦ ವರ್ಷಗಳಿಂದ ನಿವೇಶನ ಹಂಚಿಕೆಯಾಗಿರುವುದಿಲ್ಲ. ಆದ್ದರಿಂದ ಟೈಲರ್‌ಗಳಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಡಿ.ಎಸ್.ಎಸ್ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ಯಾವುದೇ ಸಮುದಾಯವಾಗಲೀ ಕಗ್ಗೊಲೆ ಮಾಡಬಾರದು. ಸಂವಿಧಾನದಲ್ಲಿ ಕೊಲೆ ಮಾಡಲು ಯಾರಿಗೂ ಅವಕಾಶ ಇಲ್ಲ. ಕೋಮು ಭಾವನೆಯನ್ನು ಬಿಟ್ಟು ಶಾಂತಿಯಿಂದ ಬದುಕಬೇಕು ಹಾಗೂ ತಪ್ಪಿತಸ್ಥರಿಗೆ ಕೂಡಲೇ ಗಲ್ಲುಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ನಂತರ ಉಪ ತಹಸೀಲ್ದಾರ್ ಶಕಿಲಾಬಾನುರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಕಲ್ಪ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಲೋಕೇಶ್, ನಾಗೇಂದ್ರ, ಸ್ವಾಮಿ, ಪಾಂಡುರಂಗ ರಾವ್, ಮಹದೇವ್, ಬಾಂಬೆ ಟೈರ‍್ಸ್ ಚಂದ್ರು, ಮಹದೇವರಾವ್, ನವೀನ್, ಹನಗೋಡು ಚಂದ್ರಣ್ಣ, ಜಯರಾಮ್, ಶಾಂತಮೂರ್ತಿ, ಮಹೇಂದ್ರ, ಸ್ವಾಗತ್ ಟೈರ‍್ಸ್ ಚಂದ್ರು ಮತ್ತಿತರರಿದ್ದರು.