ಹುಣಸೂರು: ನಗರದಾದ್ಯಂತ ಅಳವಡಿಸಿದ್ದ 200 ಕ್ಕೂ ಹೆಚ್ಚು ಅನಧಿಕೃತ ಫ್ಲೆಕ್ಸ್ ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿದರು.
ನಗರದ ಮುಖ್ಯರಸ್ತೆಗಳಾದ ಜೆ.ಎಲ್.ಬಿ.ರಸ್ತೆ ಬಸ್ ನಿಲ್ದಾಣದ ಮುಂಭಾಗದ ಜೋಡಿ ರಸ್ತೆ,ಎಸ್.ಜೆ.ರಸ್ತೆಗಳಲ್ಲಿ ರಾಜಕಾರಣಿಗಳ ಹುಟ್ಟು ಹಬ್ಬ, ನಿಧನ, ದೇವಾಲಯಗಳ ವಾರ್ಷಿಕೋತ್ಸವದ ಬೃಹತ್ ಫ್ಲೆಕ್ಸ್ ಅಳವಡಿಸಿದ್ದ ರಾಜಕಾರಣಿಗಳ ಅಭಿಮಾನಿಗಳು ನಗರಸಭೆಯಿಂದ ಅನುಮತಿ ಪಡೆಯುವುದಿರಲಿ, ಕಾರ್ಯ ಕ್ರಮಗಳು ಮುಗಿದ ನಂತರ ತೆರವುಗೊಳಿಸದೆ ಎಲ್ಲೆಂದರಲ್ಲಿ ಬಿದ್ದಿದ್ದವು, ಹಾರಾಡುತ್ತಿದ್ದವು.ಬೃಹತ್ ಫ್ಲೆಕ್ಸ್ ತೆರವುಕೊಳಿಸದಿದ್ದುದರಿಂದ ತಿರುವುಗಳಲ್ಲಿ ಬರುತ್ತಿದ್ದ ವಾಹನಗಳು ಕಾಣದೆ ಅಪಘಾತಕ್ಕೂ ಕಾರಣವಾಗಿತ್ತು.
ನಾಗರಿಕರು ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.ಜನರು ಆಡಳಿದದ ವಿರುದ್ದ ಹಿಡಿಶಾಪ ಹಾಕುತ್ತಿದ್ದರು.
ಗುರುವಾರ ನಗರಸಭೆಯ ಮೂರು ಟಾಟಾ ಏಸ್ ವಾಹನಗಳಲ್ಲಿ ಆಗಮಿಸಿದ ನಗರಸಭೆ ಸಿಬ್ಬಂದಿಗಳು ಪೊಲೀಸ್ ರಕ್ಷಣೆಯಲ್ಲಿ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದರು. ಕೊನೆಗೂ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ನಗರಸಭೆ ಅಧಿಕಾರಿಗಳನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ಆರೋಗ್ಯ ನಿರೀಕ್ಷಕ ರಾಜೇಂದ್ರ, ಎಎಸ್ಐ ಶ್ರೀಕಂಠಮೂರ್ತಿ ನೇತೃತ್ವದಲ್ಲಿ ನಗರಸಭೆಯ 10 ಕ್ಕೂ ಹೆಚ್ಚು ಸಿಬ್ಬಂದಿಗಳು ಫ್ಲೆಕ್ಸ್ ಗಳನ್ನು ತೆರವುಗೊಳಿಸಿದರು.