ಹುಣಸೂರು: ಕೊಡಗಿನಲ್ಲಿ ಹುಟ್ಟಿ ನಾಗರಹೊಳೆ ಉದ್ಯಾನದೊಳಗಿನಿಂದ ಹರಿದು ಬಂದು ಹುಣಸೂರು ತಾಲೂಕಿನ ಮೂಲಕ ಹರಿದು ಕಾವೇರಿ ಒಡಲು ಸೇರುವ ಲಕ್ಷಣತೀರ್ಥ ನದಿಯಲ್ಲಿ ಒಳ ಹರಿವು ಹೆಚ್ಚುತ್ತಿದ್ದು, ಹನಗೋಡು ಕಟ್ಟೆಯ ಮೇಲೆ ಧುಮ್ಮಿಕ್ಕಿ ಹರಿಯುತ್ತಿದೆ.
ಕೊಡಗಿನ ಇರ್ಪುವಿನಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿಯು ನಾಗರಹೊಳೆ ಉದ್ಯಾನವನದೊಳಗೆ ಹರಿಯುವುದರಿಂದ ಉದ್ಯಾನದೊಳಗಿನ ಸಾರಥಿ ಮತ್ತು ನಾಗರಹೊಳಯೂ ಭರ್ತಿಯಾಗಿದ್ದು, ಲಕ್ಷ್ಮಣತೀರ್ಥ ನದಿಯೊಂದಿಗೆ ಸೇರಿ ಹುಣಸೂರು ತಾಲೂಕಿನ ಕೊಳವಿಗೆಯ ರಾಮಲಿಂಗೇಶ್ವರ ದೇವಾಲಯದ ಬಳಿಯಿಂದ ತಾಲೂಕು ಪ್ರವೇಶಿಸಿ ಹನಗೋಡು ಕಟ್ಟೆಯಿಂದ ಸುಮಾರು 4 ಅಡಿಗಳಷ್ಟು ಎತ್ತರ ಪ್ರವಾಹದ ನೀರು ಹರಿಯುತ್ತಿದೆ.
ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಸತತ ಬೀಳುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿ ಒಳಹರಿವು ಹೆಚ್ಚುತ್ತಲೇ ಇದ್ದು, ಪ್ರವಾಹ ಭೀತಿ ಎದುರಾಗಿದ್ದು, ನದಿಯಲ್ಲಿ ಮತ್ತಷ್ಟು ಪ್ರಮಾಣದ ನೀರು ಹರಿದು ಬಂದಲ್ಲಿ ನೇಗತ್ತೂರು, ಶಿಂಡೇನಹಳ್ಳಿ, ದಾಸನಪುರ,ಕೊಳವಿಗೆ, ಬಿಲ್ಲೇನಹೊಸಹಳ್ಳಿ, ಉಡುವೆಪುರ, ಕೋಣನಹೊಸಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಬೆಳೆಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ನ್ಯಾ.ಸಂದೇಶ್ ಅವರ ಆದೇಶ, ಟೀಕೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಎಡಿಜಿಪಿ
4500 ಕ್ಯೂಸೆಕ್ಸ್ ನೀರು: ಅಣೆಕಟ್ಟೆ ಮೇಲೆ 4500 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಅಣೆಕಟ್ಟು ವ್ಯಾಪ್ತಿಯ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ನಾಲೆಯಲ್ಲಿ ನೀರು ಹರಿಸಲಾಗುತ್ತಿಲ್ಲ ಎಂದು ಎಇಇ ರಂಗಯ್ಯ ತಿಳಿಸಿದ್ದಾರೆ.