ಹುಣಸೂರು: ಸೋಮವಾರ ಬೆಳಗಿನ ಜಾವ ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಮುಂಜಾನೆ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತಗೊಳಿಸಿದ್ದರೆ, ಭಾರೀ ಸದ್ದಿನೊಂದಿಗೆ ಸಿಡಿಲು ಬಡಿದು ಜನ ಗಾಬರಿಯಾಗಿದ್ದರು.
ಸೋಮವಾರ ಮುಂಜಾನೆ 4-7 ಗಂಟೆವರೆಗೆ ಸುರಿದ ಜೋರು ಮಳೆಯಿಂದಾಗಿ ಹುಣಸೂರು ನಗರದ ಬಸ್ ನಿಲ್ದಾಣದ ಎದುರಿನ ಕಲ್ಪತರು ವೃತ್ತದ ಅಂಗಡಿಗಳಿಗೆ ನೀರು ನುಗ್ಗಿತ್ತು. ಡಿವೈಎಸ್‌ಪಿ ಕಚೇರಿ ಎದುರಿನ ಚರಂಡಿಯನ್ನು ಸಿಮೆಂಟ್ ಕಾಂಕ್ರಿಟ್ ಹಾಕಿದ್ದರಿಂದ ನೀರು ಸರಾಗವಾಗಿ ಹರಿಯಲಾಗದೆ ರಸ್ತೆಮೇಲೆ ನೀರು ನಿಂತಿತ್ತು. ಮುಂಜಾನೆ 6ರ ವೇಳೆಗೆ ಬಾರೀ ಸದ್ದಿನೊಂದಿಗೆ ಸಿಡಿಲು ಬಡಿದು ಜನರನ್ನು ಗಾಬರಿಗೊಳಿಸಿತ್ತು.
ಅಲ್ಲದೆ ಶಬ್ಬೀರ್ ನಗರ ರಸ್ತೆಯ ಕಾರ್‌ಗ್ಯಾರೇಜ್, ಹಾರ್ಡ್ವೇರ್ ಅಂಗಡಿಗಳಿಗೆ ನೀರು ನುಗ್ಗಿತ್ತು. ಕೋಟೆ ರಸ್ತೆಯ ಪಂಪ್‌ಹೌಸ್ ಬಳಿ ಹಾಗೂ ಹೆದ್ದಾರಿಯ ಕೋರ್ಟ್ ವೃತ್ತದಲ್ಲಿ ಹೊಳೆಯಂತಾಗಿತ್ತು. ಇನ್ನು ಸತತ ಮೂರು ದಿನಗಳ ರಜೆಯಿಂದ ಬಸ್ ನಿಲ್ದಾಣದಲ್ಲಿ ಮುಂಜಾನೆಯಿಂದಲೇ ಪ್ರಯಾಣಿಕರಿಂದ ತುಂಬಿತ್ತಾದರೂ ಮಳೆಯಿಂದಾಗಿ ಬಸ್ ಹತ್ತಲಾಗದೆ ಮೈಸೂರಿಗೆ ತೆರಳುವ ಪ್ರಯಾಣಿಕರ ಪಾಡು ಹೇಳತೀರದಾಗಿತ್ತು. ಮಳೆಯಲ್ಲೇ ನೆನೆಯುತ್ತಾ ಸಿಕ್ಕ ಬಸ್ ಹತ್ತಿದರು. ಭಾನುವಾರ ರಾತ್ರಿ ಹನಗೋಡು ಹೋಬಳಿಯ ಮುತ್ತುರಾಯನಹೊಸಹಳ್ಳಿ, ಹರೀನಹಳ್ಳಿ ಸುತ್ತಮುತ್ತ ಬಿದ್ದಿದ್ದ ಭಾರೀ ಮಳೆಯು ಸೋಮವಾರ ಬೆಳಗ್ಗೆಯೂ ಸಹ ಮಳೆ ಬಿದ್ದು, ಅಪಾರ ಪ್ರಮಾಣದಲ್ಲಿ ತಂಬಾಕು, ಶುಂಠಿ ಬೆಳೆ ಹಾನಿಯಾಗಿದೆ. ಅಲ್ಲಲ್ಲಿ ಹೊಲದ ಮಣ್ಣು ಕೊಚ್ಚಿ ಹೋಗಿದ್ದು, ಅತಿಯಾದ ಮಳೆಯಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಷ್ಟೆ ಅಲ್ಲದೆ ತಟ್ಟೆಕೆರೆ, ನಿಲುವಾಗಿಲು, ರಾಮೇನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲೂ ಬೆಳೆ ಹಾನಿಯಾಗಿದೆ.
ಹರೀನಹಳ್ಳಿ ಹಾಗೂ ನಿಲುವಾಗಿಲಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ವಿರಾಜಪೇಟೆ ರಸ್ತೆಯ ಕಲ್ಲಹಳ್ಳಿ ಬಳಿ, ಚಿಲ್ಕುಂದ, ಅತ್ತಿಕುಪ್ಪೆಯಲ್ಲಿ 6 ವಿದ್ಯುತ್ ಕಂಬ ನೆಲಕ್ಕುರುಳಿದೆ.ಹರೀನಹಳ್ಳಿಯಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿ ಪಾತ್ರೆಗಳನ್ನು ಹೊತ್ತೊಯ್ದಿದೆ. ಮಳೆಯಿಲ್ಲದೆ ಬಸವಳಿದ್ದಿದ್ದ ರೈತರಿಗೆ ಸುರಿದ ಮಳೆ ಸಂತಸ ತಂದಿತ್ತಾದರೂ ಒಮ್ಮೆಲೆ ಸುರಿದ ಅಪಾರ ಮಳೆಯು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.