ಹುಣಸೂರು: ಕೊಟ್ಟಿಗೆಗೆ ನುಗ್ಗಿದ ಹುಲಿಯೊಂದು ಮೇಕೆಯನ್ನು ಕೊಂದು ಎಳೆದೊಯ್ದು ತಿಂದು ಹಾಕಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ಸಿಂಡೇನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದ್ದು ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಸಿಂಡೇನಹಳ್ಳಿ ಗ್ರಾಮದ ಸತೀಶ್‌ರ ಕೊಟ್ಟಿಗೆಯಲ್ಲಿ ಮೇಕೆ ಕಟ್ಟಿ ಹಾಕಿದ್ದು, ಗುರುವಾರ ಬೆಳಗಿನ ಜಾವ ಹುಲಿಯೊಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯ ಮೇಲೆ ದಾಳಿ ನಡೆಸಿ ಸಂಪೂರ್ಣ ತಿಂದು ಹಾಕಿದೆ.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.
ಈ ಭಾಗದಲ್ಲಿ ಈಗಾಗಲೆ ಜೋಳ, ಶುಂಠಿ ನಾಟಿ ಮಾಡಿದ್ದು, ಕೆಲವೇದಿನಗಳಲ್ಲಿ ೩-೪ ಅಡಿಗಳಷ್ಟು ಎತ್ತರಕ್ಕೆ ಬೆಳೆ ಬೆಳೆಯಲಿದೆ. ಈಗ ಹುಲಿ ಹೆಜ್ಜೆ ಪತ್ತೆಮಾಡಿ ಹುಲಿಯನ್ನು ಸೆರೆ ಹಿಡಿಯಬಹುದು, ಬೆಳೆ ಬೆಳೆದ ನಂತರದಲ್ಲಿ ಹುಲಿಯನ್ನು ಪತ್ತೆ ಮಾಡುವುದೇ ಕಷ್ಟವಾಗಲಿದ್ದು, ಬುಧವಾರ ನಮ್ಮ ಜಮೀನನಲ್ಲೇ ಓಡಾಡಿರುವ ಹೆಜ್ಜೆ ಗುರಿತಿದೆ, ಗುರುವಾರ ಬೆಳಗ್ಗೆ ಮನೆ ಮುಂದೆ ಹೋಗಿಕೊಟ್ಟಿಗೆಗೆ ನುಗ್ಗಿ ಮೇಕೆ ಕೊಂದು ಹಾಕಿದೆ. ಇನ್ನು ಬೆಳೆಯೊಳಗೆ ಸೇರಿಕೊಂಡು ಸಾಕು ಪ್ರಾಣಿಗಳು, ಮನುಷ್ಯರ ಪ್ರಾಣಕ್ಕೂ ಎರವಾಗುವ ಮುನ್ನ ಹುಲಿ ಸೆರೆ ಹಿಡಿಯಬೇಕೆಂದು ನೇರಳಕುಪ್ಪೆ ಮಹದೇವ್ ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಆಗ್ರಹ :
ಈ ಭಾಗದಲ್ಲಿ ಆಗಿದ್ದಾಂಗ್ಗೆ ಹುಲಿ-ಚಿರತೆಗಳು ಜನ ಜಾನುವಾರುಗಳ ಮೇಲೆ ದಾಳಿ ನಡೆಸಿ ಕಾಡಂಚಿನ ಜನರನ್ನು ಭಯಭೀತಿಗೊಳಿಸುತ್ತಿವೆ. ಈ ಭಾಗದಲ್ಲಿ ಗಿರಿಜನ ಹಾಡಿಗಳು ಸೇರಿದಂತೆ ಹತ್ತಾರು ಗ್ರಾಮ ಹಾಗೂ ಹಾಡಿಗಳಿದ್ದು, ಹುಲಿಯ ಭಯದಿಂದ ಜನರು ಓಡಾಡಲು ಹೆದರುತ್ತಿದ್ದು, ಬೋನಿಟ್ಟು ಹುಲಿ ಸೆರೆಹಿಡಿದು, ಈ ಭಾಗದ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.