ಹುಣಸೂರು: ಹುಣಸೂರು ನಗರಸಭೆಯ 2019-20 ಮತ್ತು 2021-2022 ನೇ ಸಾಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನಿಗದಿ ಸೇರಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡದ ನಗರಸಭೆ ಅಧಿಕಾರಿಗಳಿಬ್ಬರಿಗೆ ರಾಜ್ಯ ಮಾಹಿತಿ ಆಯೋಗ ತಲಾ 25 ಸಾವಿರ ರೂ. ದಂಡ ವಿಧಿಸಿದೆ.
ತಾಲೂಕು ಅಜಾದ್‌ನಗರದ ನಿವಾಸಿ ಮಜಾಜ್‌ಅಹಮದ್ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ವೇಳೆ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಎಇಇ ಮಂಜುನಾಥ್, ಪ್ರಸ್ತುತ ಎಇಇ ಶರ್ಮಿಳಾರಿಗೆ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಒಂದೇ ಕಂತಿನಲ್ಲಿ ಮುಂದಿನ ತಿಂಗಳು ವೇತನ ಪಾವತಿಸುವ ವೇಳೆ ಕಡಿತಗೊಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಆಯೋಗ ಆದೇಶಿಸಿದೆ.
ಅರ್ಜಿದಾರರು 2021ರ ಡಿಸೆಂಬರ್ ತಿಂಗಳಿನಲ್ಲಿ ನಗರಸಭೆಯ 2019-20 ಮತ್ತು 2021-2022ರಸಾಲಿನ ಅನುದಾನ ನಿಗದಿ, ಬಳಕೆಯಾಗಿರುವ ಅನುದಾನ, ಕಾಮಗಾರಿಯ ವಿವರ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಯ ವಿವರ ಹಾಗೂ ಉಳಿಕೆ ಮೊತ್ತದ ಅನುದಾನದ ಕುರಿತಾಗಿ ದಾಖಲೆ ಪ್ರತಿಗಳನ್ನು ದೃಢೀಕರಿಸಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಉತ್ತರ ಬಾರದಿದ್ದಾಗ ಪ್ರಥಮ ಮೇಲ್ಮನವಿ ಪ್ರಾಧಿಕಾರ ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದರೂ ಉತ್ತರ ಬಾರದಿದ್ದಾಗ 2022ರ ಜನವರಿಯಲ್ಲಿ ರಾಜ್ಯ ಆಯೋಗಕ್ಕೆ ದೂರು ನೀಡಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಆಯೋಗವು ಈರ್ವರು ಅಧಿಕಾರಿಗಳು ಕರ್ತವ್ಯ ಲೋಪವೆಸಗಿರುವುದು ಸಾಬೀತಾದ್ದರಿಂದ ಮಾಹಿತಿ ಹಕ್ಕು ಆಯೋಗವು ದಂಡ ವಿಧಿಸಿ ತೀರ್ಪಿತ್ತಿದ್ದಾರೆ.