ಹುಣಸೂರು: ಹನುಮಂತೋತ್ಸವ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಉತ್ಸವ ಮೂರ್ತಿಗಳ ಮೆರವಣಿಗೆ ರದ್ದು ಮಾಡಲಾಗಿದೆ.
ನಗರದ ಆಂಜನೇಯಸ್ವಾಮಿ ದೇವಾಲಯದಿಂದ ಉತ್ಸವ ಮೂರ್ತಿಗಳನ್ನು ರಂಗನಾಥ ಬಡಾವಣೆಗೆ ಕೊಂಡೊಯ್ದು ಅಲ್ಲಿಂದ ಹನುಮ ಭಕ್ತರೊಂದಿಗೆ ನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು.
ಜಿಲ್ಲಾಧಿಕಾರಿಗಳು ಕೊವಿಡ್ ಹಿನ್ನೆಲೆಯಲ್ಲಿ 500 ಕ್ಕಿಂತ ಹೆಚ್ಚು ಜನ ಸೇರದಂತೆ ಆದೇಶಿದ್ದರಾದರೂ ಸಮಿತಿಯವರು ಮೆರವಣಿಗೆ ನಡೆಸಲು ಅನುಮತಿಗಾಗಿ ಸತತ ಪ್ರಯತ್ನ ಮಾಡಿದ್ದರು.
ಶನಿವಾರ ಬೆಳಗ್ಗೆ ಮೆರವಣಿಗೆ ಆರಂಭಕ್ಕೂ ಮುನ್ನವೇ ಹೆಚ್ವಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದಾಗಿ ಎಸ್.ಪಿ. ಚೇತನ್ ಹಾಗೂ ತಾಲೂಕು ದಂಡಾಧಿಕಾರಿಯಾದ ತಹಸೀಲ್ದಾರ್ ಆಯೋಜಕರನ್ನು ಮನವೊಲಿಸಿದ ಹಿನ್ನಲೆಯಲ್ಲಿ ಮೆರವಣಿಗೆ ಕೊನೆ ಗಳಿಗೆಯಲ್ಲಿ ರದ್ದುಗೊಳಿಸಲಾಯಿತು.
ಮೆರವಣಿಗೆ ರದ್ದಾದ ಹಿನ್ನೆಲೆಯಲ್ಲಿ, ಗಾವಡಗೆರೆ ನಟರಾಜ ಸ್ವಾಮೀಜಿ, ಮಾದಹಳ್ಳಿ ಉಕ್ಕಿನ ಕಂತೆ ಮಠದ ಸಾಂಬ ಸದಾಶಿವ ಸ್ವಾಮೀಜಿ, ಶಾಸಕ ಎಚ್.ಪಿ.ಮಂಜುನಾಥ್, ಎಂಎಲ್.ಸಿ.ವಿಶ್ವನಾಥ್, ಹು.ಡಾ ಅಧ್ಯಕ್ಷ ಗಣೇಶ ಕುಮಾರಸ್ವಾಮಿ ಪೂಜೆ ಸಲ್ಲಿಸಿ ಮರಳಿದರು.
ಸಮಿತಿಯ ಯೋಗಾನಂದ ಕುಮಾರ್, ಅನಿಲ್, ವಿಎನ್.ದಾಸ್, ಗಿರೀಶ್ ಸಾರ್ವಜನಿಕರಲ್ಲಿ ಮಾಡಿದ ಮನವಿಗೆ ನೆರೆದಿದ್ದ ಭಾರಿ ಸಂಖ್ಯೆಯ ಹನುಮ ಭಕ್ತರು ನಿರಾಸೆಯಿಂದ ವಾಪಸ್ಸಾದರು.