Advertisement

ಹಸಿವು ಮುಕ್ತ ಕರ್ನಾಟಕವೇ ಗುರಿ

10:59 AM Oct 14, 2021 | Team Udayavani |

ಅಫಜಲಪುರ: ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಜನರಿಗೆ ಉಚಿತವಾಗಿ ಏಳು ಕೆಜಿ ಅಕ್ಕಿ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದೇನೆ. ನನಗೆ ಹಸಿವು ಮುಕ್ತ ಕರ್ನಾಟಕ ಮಾಡುವ ಗುರಿ ಇತ್ತು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದ ನ್ಯಾಷನಲ್‌ ಫಂಕ್ಷನ್‌ ಹಾಲನಲ್ಲಿ ಸಮಾಜ ಸೇವಕ ಜೆ.ಎಂ. ಕೊರಬು ಫೌಂಡೇಶನ್‌ ವತಿಯಿಂದ ತಾಲೂಕಿನ 10 ಸಾವಿರ ಬಡ ಕುಟುಂಬ ಗಳಿಗೆ ಆಹಾರ ಸಾಮಗ್ರಿ ಹಾಗೂ ದಿನಸಿ ಕಿಟ್‌ ವಿತರಿಸುವ ಕಾರ್ಯಕ್ರಮದಲ್ಲಿ ಬಡ ವರಿಗೆ ಕಿಟ್‌ ವಿತರಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯ ಕೆಟ್ಟ ಆರ್ಥಿಕ ನೀತಿಯಿಂದಾಗಿ ಕಡಿಮೆ ಇದ್ದ ಬಡತನ ಮತ್ತೆ ಹೆಚ್ಚಾಗುತ್ತಿದೆ. ಮೋದಿ ಸರ್ಕಾರದ ವೈಫಲ್ಯಗಳೀಗ ಜನರಿಗೆ ಗೊತ್ತಾಗಿವೆ. ಇವರಿಂದಾಗಿ ದೇಶದಲ್ಲಿ ಕೋವಿಡ್‌ದಿಂದ ಲಕ್ಷಾಂತರ ಜನರು ಮೃತಪಡುವಂತೆ ಆಯಿತು. ಜನರಿಗೆ ವ್ಯಾಕ್ಸಿನ್‌ ಬೇಕಾಗಿತ್ತೇ ಹೊರತು ಗಂಟೆ, ಜಾಗಟೆ ಬಡಿಯಿರೆಂದು ಹೇಳುವುದು ಸರಿಯಲ್ಲ. ದೇಶವಾಳಲು ಬಾರದ ಬಿಜೆಪಿಗರು ನಾಲಾಯಕರು ಎಂದರು.

ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ ನರೇಗಾ ಯೋಜನೆ ಜಾರಿಗೆ ತಂದಿದ್ದರಿಂದ ಈಗ ದೇಶದ ಕೋಟ್ಯಂತರ ಬಡವರಿಗೆ ಕೂಲಿ ಕೆಲಸ ಸಿಕ್ಕಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಉಚಿತವಾಗಿ 7 ಕೆಜಿ ಅಕ್ಕಿ ನೀಡಿದ್ದರಿಂದ ರಾಜ್ಯದ ಬಡವರ ಹೊಟ್ಟೆ ತುಂಬಿದೆ. ಅಲ್ಲದೇ ಸಮಾಜ ಸೇವಕ ಜೆ.ಎಂ ಕೊರಬು ತಾಲೂಕಿನ 10 ಸಾವಿರ ಜನರಿಗೆ ದಿನಸಿ ಕಿಟ್‌ ವಿತರಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು ಮಾದರಿ ಕೆಲಸವಾಗಿದೆ. ಕೊರಬು ಸಮಾಜ ಸೇವೆ ಶ್ಲಾಘನೀಯ ಎಂದರು.

ಇದನ್ನೂ ಓದಿ: ಅನ್ನದಾತನಿಗೆ ಸರ್ಕಾರಗಳಿಂದ ಚೂರಿ: ಸಿದ್ದು

ಸಮಾಜ ಸೇವಕ ಜೆ.ಎಂ. ಕೊರಬು ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ದೇವರಾಜ ಅರಸು ಜನರಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದರು. ಅವರ ಬಳಿಕ ಸಿದ್ದರಾಮಯ್ಯ ರಾಜ್ಯದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡಿದ್ದಾರೆ. ಅವರು ನನಗೆ ಆದರ್ಶವಾಗಿದ್ದಾರೆ. ಉಚಿತ ಅಕ್ಕಿ ನೀಡುವ ಮೂಲಕ ರಾಜ್ಯದ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ಅವರಿಂದ ಪ್ರೇರಣೆಯಾಗಿ ನಾನು ಜೆ.ಎಂ ಕೊರಬು ಫೌಂಡೇಶನ್‌ ವತಿಯಿಂದ ತಾಲೂಕಿನ ಬಡವರಿಗೆ ಉಚಿತವಾಗಿ ಆಹಾರ, ದಿನಸಿ ಕಿಟ್‌ ನೀಡುತ್ತಿದ್ದೇನೆ. ಈ ಹಿಂದೆಯೂ ಪ್ರವಾಹ, ಬರಗಾಲ ಬಂದಾಗ ತಾಲೂಕಿನಾದ್ಯಂತ ಅಡ್ಡಾಡಿ ಜನ ಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದೇನೆ ಎಂದು ಹೇಳಿದರು.

Advertisement

ತಾಲೂಕಿನ ನಿಲೂರ ರೈಲ್ವೆ ಕೆಳ ಸೇತುವೆ ಅಗಲಿಕರಣ ಕಾಮಗಾರಿ ಆಗದೇ ಇರುವುದರಿಂದ ಅಲ್ಲಿನ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟು, ರಾಜ್ಯ ಸರ್ಕಾರದವರು 3 ಕೋಟಿ ರೂ. ಅನುದಾನ ನೀಡಿದರೆ ಅನುಕೂಲವಾಗುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹೇಳಿ ಸಾಕಾಗಿದೆ. ಹೀಗಾಗಿ ಇದನ್ನು ಸದನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳೂವಂತೆ ಮಾಡಿ ಎಂದು ಮನವಿ ಮಾಡಿದರು. ಕುರುಬ ಸಮಾಜದ ಮುಖಂಡರು ಸಿದ್ದರಾಮಯ್ಯ ಅವರಿಗೆ ಟಗರು ಕಾಣಿಕೆಯಾಗಿ ನೀಡಿ, ಸತ್ಕರಿಸಿದರು. ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು, ಪಟ್ಟಣದ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶಿವರ್ಚ ನೀಡಿದರು.

ಶಾಸಕರಾದ ಎಂ.ವೈ. ಪಾಟೀಲ, ಅಜಯಸಿಂಗ್‌, ಮಾಜಿ ಶಾಸಕರಾದ ಬಾಬುರಾವ್‌ ಚವ್ಹಾಣ, ಸಿದ್ರಾಮಪ್ಪ ಮೇತ್ರೆ, ಅಲ್ಲಮಪ್ರಭು ಪಾಟೀಲ, ಮುಖಂಡರಾದ ಮಕ್ಬೂಲ್  ಪಟೇಲ್‌, ಸಾಸಿ ಬೆನಕನಹಳ್ಳಿ, ಮಹಾಂತೇಶ ಪಾಟೀಲ, ದಿಲೀಪ ಪಾಟೀಲ, ಜೆ.ಎಂ ಕೊರಬು ಫೌಂಡೇಶನ್‌ನ ಶಿವಪುತ್ರಪ್ಪ ಜಿಡ್ಡಗಿ, ಬಿರಣ್ಣ ಕನಕಟೇಲರ್‌, ರಮೇಶ ಪೂಜಾರಿ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.